Thursday, December 31, 2009

ಪಯಣ

ಮೋಡದ ಮರೆಯಲ್ಲಿನ ಸೂರ್ಯ ಪಕ್ಕನೆ ಬೆಳಕು ಚೆಲ್ಲಿದ ಹಾಗೆ, ದೂರದ ಸಾಗರದಾಚೆ ಇರುವ ನನ್ನ ರಾಜಕುಮಾರಿಯನ್ನು ಸೇರುವ ವಿಚಾರ ಆಲ್ಮೋಸ್ಟ್  ಪಕ್ಕಾ ಆಗಿತ್ತು . ಎಷ್ಟೋ ದಿನದಿಂದ ಕನಸಾಗಿ ಕಂಡ ಆಸೆ ನನಸಾಗಿತ್ತು .  ಮಳೆಗಾಲದ ಬಿಸಿಲಿನಂತೆ ಅದೆಷ್ಟು ಸಾರೆ ಅವಳನ್ನು ನೋಡಲು ಹೋಗುವ ವಿಚಾರ ಆಗಾಗ ಸುಳಿದು  ಹೋಗುತ್ತಿದ್ದರೂ ಯಾಕೋ ಅದಕ್ಕೆ ಮೂರ್ತ ರೂಪವೇ ಬಂದಿರಲಿಲ್ಲ .

ನನ್ನ ಹೆಜ್ಜೆಯನ್ನೇ ಅನುಸರಿಸಿ ನನ್ನನ್ನೇ ಹಿಂಬಾಲಿಸುತ್ತಾ ದೂರದ ದಾರಿಯವರೆಗೂ ಬಂದವಳು ಮಧ್ಯ ದಾರಿಯಲ್ಲೆಲ್ಲೋ ತನ್ನ ಗುರಿಯನ್ನು ಅರಸುತ್ತ ದಿಡೀರ್ ಆಗಿ ಸಾಗರದಾಚೆ ಸಿಡಿದವಳು. ಅವಳ ಕಣ್ಣ ಬೆಳಕಲ್ಲೇ  ನನ್ನ ಕನಸನ್ನು ಕಂಡು , ಅವಳ  ಉಸಿರಾಟಕ್ಕೇ  ನನ್ನ ಉಸಿರನ್ನ ಹೊಂದಿಸಿಕೊಂಡವಳಿಗೆ ಅದೆಷ್ಟೋ ಕಾಲ ಉಸಿರಾಡುವುದೇ ಮರೆತ ಅನುಭವ. ನನ್ನ ಸುರಕ್ಷಿತತೆಯ ಭಾವಕ್ಕೆ ಅವಳ ವೇಗದ ನಡಿಗೆಗೆ ತಡೆಯಾಗಲು ಮನಸ್ಸಾಗಲಿಲ್ಲ. ಅವಳ ಸ್ಪೂರ್ತಿಯ ಚಿಲುಮೆಗೆ ನೀರೆರೆಯಲು ಅದೂ ಒಂದು ಕಾರಣವಾಗಿರಬಹುದು . ಅಂದಿನ ನಮ್ಮ ನಿರ್ಧಾರ ಸರಿಯೋ  ಅಥವಾ ಸರಿ ಅಲ್ಲವೋ ಎಂಬುದು ನನಗೆ ಇಂದಿಗೂ  ತಿಳಿದಿಲ್ಲ .

 ಸಾಧನೆಯ ದಾರಿ ಬಲು ದೂರ ಮತ್ತು ದುರ್ಗಮ . ದೂರದ ದಾರಿಗೆ ಬೆದರಿ ಅದೆಷ್ಟು  ಕಂಗೆಟ್ಟಿದ್ದಳೋ , ನಡೆಯುವಾಗ ದಾರಿಯಲ್ಲಿರುವ ಕಲ್ಲು ಮುಳ್ಳು ನನ್ನ ರಾಜಕುಮಾರಿಯ ಪುಟ್ಟ ಪಾದಗಳಿಗೆ ಚುಚ್ಚಿ ಅವಳನ್ನು ಅದೆಸ್ಟು ಘಾಸಿಗೊಳಿಸಿತ್ತೋ , ಈ ಎಲ್ಲ ದುಸ್ವಪ್ನಗಳು ನನ್ನನ್ನು ಎಡಬಿಡದೆ ಕಾಡುತ್ತಿದ್ದವು . ಆದರೆ ಈಗ ನನ್ನ ರಾಜಕುಮಾರಿಯನ್ನು  ಸೇರುವ ಕಲ್ಪನೆ ಮೂರ್ತ ಗೊಂಡಿದೆ .

ಈಗೆಲ್ಲ ಬಣ್ಣಬಣ್ಣದ ಕನಸುಗಳು. ಈಗ.ಪರಸ್ಪರ ಭಾವನೆಗಳನ್ನು ಹಂಚಿಕೊಂಡು ಹಗುರಾಗುವ ಕಾಲ . ಮತ್ತೆ ಹಿಂದಿನಂತೆ ಹೆಜ್ಜೆಯನನುಸರಿಸುವ ಹೆಜ್ಜೆಗಳು ..................... ಆದರೆ ಈಗ ಯಾರ ಹೆಜ್ಜೆ? ಯಾರ ಅನುಕರಣೆ? .......................... ಖಂಡಿತವಾಗಿಯೂ ನನ್ನ ರಾಜಕಮಾರಿ ಎನ್ನುವ ಮಮಕಾರಕ್ಕೆ ಹೇಳಲಾರೆ .  ಈಗ ಅವಳು  ಎಷ್ಟು ಬೆಳೆದು ಬಿಟ್ಟಿದ್ದಾಳೆ  ಅಂದರೆ ಈಗ ನಾನೇ ಅವಳ ಫಾಲ್ಲೋವರ್.  ಆದರೂ ನಾನೇ ಅವಳಿಗಿಂತ   ಬಲ್ಲವಳು ಎಂಬ ಹುಚ್ಚು ನಂಬಿಕೆ ಅವಳಿಗೆ . ಈಗಲೂ ಮೊದಲಿನಂತೆ ನನ್ನ ಮಾತನ್ನು ಕಣ್ಣರಳಿಸಿ  ಕೇಳುತ್ತಾಳೆ . ನಿನ್ನ ಈ ನಂಬಿಕೆ ಹುಸಿ ಎಂದರೂ ಗಮನವಿಲ್ಲ ಅವಳಿಗೆ . ಅದಕ್ಕೇ ಈಗ ನಾನು ಬೆಳೆಯ ಬೇಕಾದ ಎತ್ತರದ  ಬಗೆಗೆ ನನಗೇ  ದಿಗಿಲಾಗುತ್ತಿದೆ .

ಅಂದು, ಅದೆಷ್ಟೋ  ಕಾಲದ ನಂತರ ಸಂಧಿಸಿದ ನೋಟದಲ್ಲಿ ಯಾವ ಭಾವವಿತ್ತು ? ಮಳೆಗಾಲದಲ್ಲಿ ಉಂಟಾಗುವ ಕಾಮನ ಬಿಲ್ಲಿನಂತೆ ವಿವಿಧ ಬಣ್ಣಗಳು . ಅವು ಬೆರಗ?  ಉತ್ಕಟತೆಯ? ಸಂತೋಷವ ? ನನಗೇ ಗೊತ್ತಾಗಲಿಲ್ಲ . ನನ್ನ ಕಣ್ಣು ತುಂಬಿ ಬಂದಿತ್ತು . ಎಲ್ಲವೂ ಹೊಸತು ಎಲ್ಲವೂ ಆನಂದಮಯ. ದಿನ ಕಳೆದಂತೆ ಕಳೆದಂತೆ ಆಡಿದ ಮಾತುಗಳಿಗೆ ನಕ್ಕು ನಗಿಸಿದ ವಿಷಯಗಳಿಗೆ ಕಂಡ ಕನಸುಗಳಿಗೆ ಲೆಕ್ಕ ಇಟ್ಟವರಾರು?   ಆದರೆ ಕಾಲ ನಿಂತ ನೀರಲ್ಲವಲ್ಲ .  ಒಂಟಿ ದಾರಿಗೆ ಸ್ವಲ್ಪ ದೂರ ಜೊತೆಯಾಗಿ ಬಂದು ಕಾಲ  ಮುಗಿಯುತ್ತಿದ್ದಂತೆ ನನ್ನ ಪುಟ್ಟ ರಾಜಕುಮಾರಿಗೆ ಬೈ ಬೈ ಹೇಳುವ ನನ್ನ ಅನಿವಾರ್ಯತೆಯನ್ನ, ಆ ನೋವನ್ನ ಯಾರಲ್ಲಿ ಹಂಚಿಕೊಳ್ಳಲಿ ?

Monday, December 28, 2009

ಮಾತೇ ಮರೆತವರ ನಡುವೆ

ನಾವೇಕೆ ಅಡ್ಡ ರಸ್ತೆ ಉದ್ದ ರಸ್ತೆಯ
ಈ ಮಹಡಿ ಮನೆಗೆ ಬಂದುಬಿಟ್ಟಿದ್ದೇವೆ
ಮಾತೇ ಮರೆತವರ ನಡುವೆ?


ನಾನೋ - ನೀರಿಗೋ ತರಕಾರಿಗೋ
ದಡ ದಡ ಅಂತ
ಮೆಟ್ಟಿಲ ಹತ್ತಿಳಿಯುತ್ತೇನೆ
ಒಂದಲ್ಲ, ಹತ್ತಾರು ಬಾರಿ
ಮಾತೇ ಮರೆತವರ ನಡುವೆ.


ಇವರೋ - ಹಾಲಿಗೋ ಪೇಪರಿಗೋ
ಟಿಪ್ಪು ಟಾಪಾಗಿ ಆಫೀಸಿಗೋ
ಹೋಗುತ್ತಾರೆ, ಬರುತ್ತಾರೆ
ಮಾತೇ ಮರೆತವರ ನಡುವೆ.


ಮಗ - ದೀಪು, ದೀಪಾ, ದೀಪಕ್
ಎಂದು ಕೂಗುತ್ತ ಬ್ಯಾಟ್, ಬಾಲ್ ಹಿಡಿದು,
ಬರುವ ಸ್ನೇಹಿತರಿಲ್ಲದೆ
ಟೆರೇಸಿನ ಗೋಡೆಗೇ ಚೆಂಡು ಬಾರಿಸುತ್ತ
ತನ್ನ ಒಂಟಿತನವ ಮೆರೆಯುತ್ತಾನೆ
ಮಾತೇ ಮರೆತವರ ನಡುವೆ.


ಇನ್ನು ಅಪ್ಪರ್ ಕೆಜಿಯ ಪೋರಿ -
"ಅಮ್ಮಾ ನಾವೇಕೆ ಬಂದು ಬಿಟ್ಟಿದ್ದೇವೆ
ಈ ದೊಡ್ಡ ಶಹರಕ್ಕೆ" ಎಂಬ ರಾಗವನ್ನೇ ಹಾಡುತ್ತಿರುತ್ತಾಳೆ
ಮಾತೇ ಮರೆತವರ ನಡುವೆ.


ಈ ಊರಿನ ಮಳೆಗಾದರೂ ಏನು ಧಾಡಿ
ಬೇಷರತ್ತಾಗಿ ಸುರಿಯಲಿಕ್ಕೆ
ಆಗೊಮ್ಮೆ ಈಗೊಮ್ಮೆ ಚೂರು ಪಾರು.
ಅದಕ್ಕೂ ಬೇಸರವೇ
ಈ ಮಾತೇ ಮರೆತವರ ನಡುವೆ?


ಆದರೂ ನಾವು ಬದುಕಿದ್ದೇವೆ
ಅಡ್ಡ ರಸ್ತೆಯ ಉದ್ದದ ರಸ್ತೆಯ
ಈ ಮಹಡಿಮನೆಯಲ್ಲಿ
ಮಾತೇ ಮರೆತವರ ನಡುವೆ.