Thursday, January 28, 2010

ಸಾಗುತ ಸಾಗುತ ದೂರಾ ದೂರಾ
ಬೀಸುವ  ಗಾಳಿಗೆ,  ಬೀಳುವ  ಮಳೆಗೆ, ಸುರಿಯುವ  ಹಿಮಕ್ಕೆ,  ಹರಿಯುವ  ತೊರೆಗೆ,  ವಿವಿಧ  ಬಣ್ಣಗಳಿಂದ  ಕಂಗೊಳಿಸುವ ಮರಗಿಡಕ್ಕೆ, ಅದರದೇ   ಆದ  ರೂಪ,  ಸೌಂದರ್ಯ, ವನಪು, ವೈಯ್ಯಾರ. ಸವೆಸುವ  ದಾರಿಯಲಿ ಸವಿಯುವ  ಮನಸೊಂದಿದ್ದರೆ  ಎಲ್ಲವೂ  ಚಂದ  ಚಂದವೇ. ಹಸಿರ  ವನಸಿರಿಯಲ್ಲಾ  ತಮ್ಮಷ್ಟಕ್ಕೆ ತಾವೇ ಹೊಸ ತೊಡುಗೆ  ತೊಟ್ಟು, ಕಣ್ ಮನ ತಣಿಸುವ  ಪರಿಯೇ  ಅನನ್ಯ. ಅವುಗಳ ಮೇಲೆ ಕಣ್ಣ  ಹಾಯಿಸಿದುದ್ದಕ್ಕೂ  ಹಳದಿ, ಕೆಂಪು, ಪೀತಾಂಬರ, ವಿವಿಧ  ಬಣ್ಣಗಳ  ರಾಶಿ. ಕಣ್ಣು ಅವುಗಳ ಬಣ್ಣವನ್ನು ಗುರುತಿಸಲೂ ಸೋಲುತ್ತವೆ. ಈ  ಅಪರೂಪದ  ಸೌಂದರ್ಯವನ್ನ  ಕಣ್  ತುಂಬಿಸಿಕೊಳ್ಳುವಷ್ಟರಲ್ಲಿಯೇ ಎದುರು   ನಿಂತ  ದೃಶ್ಯ   ನಯನ ಮನೋಹರವಾದ  ಜಲಪಾತ.   ಭೋರ್ಗರೆವ  ಜಲರಾಶಿಯ  ಎದುರು ನಿಂತು,  ಅದರ  ಸೊಬಗಿಗೆ  ಮೈ ಮರೆಯುವ  ಕ್ಷಣಕ್ಕೆ  ಅದೆಂತದೋ  ಧನ್ಯತಾ ಭಾವ. ಆ  ಸೌಂದರ್ಯದ   ಮತ್ತಿಗೆ  ಮಾತಲ್ಲ,  ಉಸಿರೇ  ನಿಂತ  ಅನುಭವ.   ಮುಂದುವರಿದ   ದಾರಿಯಲ್ಲಿ ಇದ್ದಕ್ಕಿದ್ದ ಹಾಗೆ  ಹಸುರು   ಹುಲ್ಲಿನ  ಮೇಲೆ  ಸುರಿದ  ಹಿಮರಾಶಿಗೆ   ಅದೆಂಥಾ   ಸೊಬಗು.   ಹಿಮದಿಂದ  ಆವೃತವಾದ  ಪ್ರಕೃತಿ,  ಶುಭ್ರವಸನೆಯಾಗಿ  ಮೈ ತಳೆದು   ನಿಂತಂತಾ ಭಾವ. ಹತ್ತಿಯಷ್ಟೇ  ಹಗುರಾದ  ಹಿಮ ಮಣಿ  ಮೈ  ಸ್ಪರ್ಶಿಸಿದಾಗ  ಅದೆಂಥಾ ಪುಳಕ! ಈ ಸುಂದರ  ದಾರಿಯಲ್ಲಿ  ಸಾಗಿ ಬಂದ  ದೂರವೇ ಗೊತ್ತಾಗಲಿಲ್ಲಾ.  ಇನ್ನೇನು  ಪಯಣವೇ ಮುಗಿದು ಹೋಯಿತು.  ಇದು  ಇಷ್ಟು ಬೇಗ ಮುಗಿದು ಹೋಯಿತೇ  ಎಂದು  ಅಂದುಕೊಂಡಿದ್ದು  ಸಾವಿರ  ಸಲ.

ಬಂದ ದಾರಿಯಲ್ಲಿ ಒಮ್ಮೆ ಹಿಂತಿರುಗಿ ನೋಡಿದರೆ....ಈ ಪಯಣಕ್ಕೆ  ನಡೆಸಿದ  ಸಿಧ್ಧತೆ ಕಡಿಮೆಯಾ ?  ಎಷ್ಟೋ  ದಿನದ ಚಿಂತನ ಮಂಥನಗಳ  ನಂತರ   ಪ್ರಯಾಣದ ನಿರ್ಧಾರ. ನಿರ್ಧಾರ  ತೆಗುದು ಕೊಂಡ ನಂತರವೂ ಕೂಡಾ  ಇದು ಸಾಧ್ಯವಾ?  ಅನ್ನುತ್ತಿತ್ತು  ಮನ ನೂರು  ಸಲ. ಈ  ಮನೆಯ ಒಂಟಿತನಕ್ಕೆ ಯಾರು ಜೊತೆ?  ಮನೆಯ ಕಾಯುವ  ಜೂಲಿ, ಮನೆಯ ಅಂಗಳದ ಗಿಡಗಳು,  ಸುತ್ತಿಕೊಂಡ  ಸಂಸಾರಗಳು,  ಒಂದಾ ಎರಡಾ ಸಮಸ್ಯೆಗಳು. ಅವುಗಳಿಗೆಲ್ಲಾ  ಪರಿಹಾರ   ಸಿಕ್ಕ  ಭಾವದ  ನಂತರ  ಕಾಡಿದ್ದು   ಭಾವುಕ  ಜಗತ್ತು.  ಒಂದೆರಡಲ್ಲ  ಆರು  ತಿಂಗಳು,  ಅಕ್ಕ ಪಕ್ಕದ ಸ್ನೇಹಿತೆಯರು, ನೆಚ್ಚಿಕೊಂಡ  ಸ್ವರ  ಸಾಮ್ರಾಜ್ಯ,  ಅರ್ಧ  ಓದಿಟ್ಟ   ಕಾದಂಬರಿಯ  ಪುಟಗಳು, ಇವೆಲ್ಲವನ್ನೂ ದಾಟಿ  ಹೊರಟಾಗ   ಏಳೋ ಹನ್ನೊಂದೋ.

ಪಶ್ಚಿಮ ಎಂದರೆ ಏನೋ ಕುತೂಹಲ. ಪಶ್ಚಿಮದಲ್ಲಿ  ಎಲ್ಲವೂ ನವನವೀನ. ಅಲ್ಲಿ ಬೀಸುವ ಗಾಳಿಯು ಹೊಸ ಗಾಳಿ ಎಂಬ ಭಾವ  ಪೂರ್ವಕ್ಕೆ.  ಆದರೆ  ಆ  ದಾರಿಗೆ ಮುಖ ಮಾಡಿ  ನಿಂತಾಗಲೇ   ಗೊತ್ತು, ಅದರ ತವಕ ತಲ್ಲಣಗಳು.  ಇಲ್ಲಿ  ತುಳಿವ  ದಾರಿ  ಹಿಂದೆ ನಡೆದ  ದಾರಿಗಿಂತಲೂ ಭಿನ್ನ ಎಂಬ ಪ್ರಜ್ಞೆಗೇ,  ಅಡಿಗಡಿಗೂ ಅನುಮಾನ, ಆತಂಕಗಳು.  ಆತಂಕದ  ನಡುವೆಯೇ   ಇಡುವ   ಉತ್ಸಾಹದ   ಹೆಜ್ಜೆ.   ಈ ಪಯಣದ  ಆರಂಭವೇ   ಒಂದು ಸೋಜಿಗ.   ಇತ್ತ  ಭುವಿಯೂ  ಅಲ್ಲದ,  ಅತ್ತ ಆಗಸವೂ  ಅಲ್ಲದ,  ಆ ಆಕಾಶಯಾನ  ವರ್ಣನೆಗೆ ನಿಲುಕದ್ದು. ನಾವು ಎಲ್ಲಿದ್ದೇವೆ  ನಮ್ಮ ಅಸ್ತಿತ್ವವೇನು  ಎಲ್ಲಾ ಗೋಜಲು ಗೋಜಲು ಅನಿಸಿಕೆಗಳು . ಪೂರ್ವವೂ ಅಲ್ಲದ, ಪಶ್ಚಿಮವೂ ಅಲ್ಲದ,  ರಾತ್ರಿಯೂ  ಅಲ್ಲದ, ಹಗಲೂ  ಅಲ್ಲದ,  ನಿದ್ರೆಯೂ  ಅಲ್ಲದ, ಎಚ್ಚರವೂ  ಅಲ್ಲದ,  ಅದೊಂದು ತ್ರಿಶಂಕು ಸ್ಥಿತಿ.  ಈ  ಸ್ಥಿತಿಯಲ್ಲೇ , ರಾತ್ರಿಯು   ಹಗಲಾಗಿ , ಹಗಲು  ರಾತ್ರಿಯಾಗುವ ಸಮಯದಲ್ಲಿ,  ಮತ್ತೆ   ಭೂಸ್ಪರ್ಶ.  ಆಗ  ಮನಕ್ಕೆ  ಒಂದು ತರಹದ  ಬಂಧ  ಮುಕ್ತದ  ಭಾವ.   ಹೊಸ ನೆಲ. ಹೊಸ  ಹೊಸ  ಮುಖ. ಸುತ್ತ ಮುತ್ತೆಲ್ಲವೂ   ಹೊಸತು. ಮೈಯಲ್ಲಾ  ಕಣ್ಣಾಗಿ, ಕಿವಿಯಾಗಿ.........ಇಡೀ ಪಂಚೆಂದ್ರಿಯವೇ  ಆಗಿ, ಹೊಸ ಜಗತ್ತನ್ನು ನೋಡುವ ಕಾತುರ.

ಜನಜಂಗುಳಿ ಇಲ್ಲದ ವಿಶಾಲವಾದ ರಸ್ತೆ.  ಶರವೇಗದಲ್ಲಿ  ಸಾಗಿದರೂ,  ಸ್ಪರ್ಧೆಗಿಳಿಯದೆ  ಸಾಗುವ  ವಾಹನಗಳು.  ಝಗಮಗಿಸುವ    ದೀಪಗಳಿಂದ ಸಾಲಂಕೃತಗೊಂಡ ದಾರಿಯಲ್ಲಿ ಹೀಗೆ ಸಾಗುತ್ತಲೇ ಇದ್ದುಬಿಡೋಣ ಅನ್ನುವ  ಬಯಕೆ.

ಹಿತವಾದ ತಂಪುಗೊಳಿಸಿದ ವಾಹನದ ಕೆಳಗಿಳಿದು, ದೃಷ್ಟಿ ಹೊರ ನೆಟ್ಟಾಗ  ಕಣ್ಸೆಳೆದದ್ದು, ಸುತ್ತಲಿನ ಹಚ್ಚಹಸುರಿನ ಪ್ರಪಂಚ. ಹುಡುಕಿದರೂ    ಕಸ ಕಡ್ಡಿ  ಸಿಗದ  ಸ್ವಚ್ಛ  ಪ್ರಶಾಂತ  ವಾತಾವರಣ.  ಅದರ  ನಡುವೆ ಶಾಂತ ಬಣ್ಣದಲ್ಲಿ ಅದ್ದಿ ನಿಲ್ಲಿಸಿದಂಥ  ಮಾಟವಾದ  ಮನೆ.   ಮನೆ,  ಮನದಲ್ಲಿ    ಆವರಿಸಿಕೊಂಡ    ಅತ್ಮಿಯತೆಗೆ, ಪ್ರೀತಿಗೆ, ತ್ಯಾಗಕ್ಕೆ  ಭರವಸೆಗೆ  ಯಾವ  ಹೋಲಿಕೆ?  ಚಿಗುರನ್ನು  ಹುಡುಕಿಕೊಂಡು  ಬಂದ  ಬೇರಿಗೆ  ತಂಪೆರೆದಷ್ಟೂ   ಕಡಿಮೆ ಎಂಬ  ಭಾವ   ಚಿಗುರಿಗೆ.  ಊಟ, ಉಪಚಾರ, ಮಾತು ಕಥೆಗಳಲ್ಲೇ   ದಿನದ   ಪೂರ್ಣತೆ.  ಪಶ್ಚಿಮ, ತನ್ನ ಅತಿಥಿಗಳಿಗಾಗಿ   ತೆರೆದ   ರಾತ್ರಿಯ  ಕದದೊಳಗಿಂದ   ಸುರಿದದ್ದು,  ನಿಶ್ಯಬ್ದ,  ನೀರವ  ವಾತಾವರಣ. ತಂಪಾದ ಗಾಳಿ . ಆದರೆ ಸೊಂಪಾದ  ನಿದ್ದೆಗೆ,   ಮನ  ಇದು  ರಾತ್ರಿ  ಎಂದು   ನಂಬಿಸಿದರೂ  ದೇಹಕ್ಕೆ ಎಲ್ಲಿಯ  ಅರಿವು?  ಕಣ್ಣ  ರೆಪ್ಪೆಗೆ  ಒಂದೊನ್ನೊಂದ   ಅಪ್ಪಿಕೊಳ್ಳಲಾರದ   ಸ್ಥಿತಿ. ಅದರ  ಅಸ್ತಿತ್ವ  ಇನ್ನೂ  ಪೂರ್ವದಲ್ಲೇ. ಅವುಗಳಿಗೆ  ಅಲ್ಲಿಯದನ್ನು  ಬಿಟ್ಟಿರಲಾಗದ   ಇಲ್ಲಿಯದನ್ನು  ಮುಟ್ಟಲಾರದ  ಹೊಯ್ದಾಟ.  ಎಲ್ಲವೂ  ಸುಂದರ, ಸುಖ, ಸೌಲಭ್ಯ, ಶಿಸ್ತು, ಅಚ್ಚುಕಟ್ಟು,ನೀಟು. ಆದರೆ ಮನಕ್ಕೆ   ಅದೆಲ್ಲದರ  ಜೊತೆಯಲ್ಲೂ  ಪೂರ್ವದ್ದೆ  ಹೋಲಿಕೆ . ತನ್ನ ನೆನಪಿನ  ಕೋಶದಲ್ಲಿ  ಭದ್ರವಾಗಿ  ತಳವೂರಿದ  ನೆನಪುಗಳ  ನೆರಳಿನಲ್ಲಿಯೇ  ಅದರ  ಬದುಕು.  ಹಾಗೂ ಅಲ್ಲಿಯದೇ  ಚೆನ್ನವಾ ಎಂಬ ಸಣ್ಣ ಅನುಮಾನ   ಸದಾ  ಅದರ  ಜೊತೆಗೇ.  ಅಲ್ಲಿಯೂ ಇಲ್ಲದ  ಇಲ್ಲಿಯೂ ಸಲ್ಲದ ಭಾವ ಅದೆಷ್ಟೋ  ದಿನದವರೆಗೂ.  ಹೊಸತನ್ನು  ಪಡೆಯುವದರ  ಜೊತೆ ಜೊತೆಗೇ,  ಪೂರ್ವದಲ್ಲಿಯ  ನಡೆದಾಡಿದ ನೆಲ, ಕೇಳಿದ ಮಾತು,  ಓದಿದ   ಪುಸ್ತಕ, ನೋಡಿದ  ದೃಶ್ಯ, ಮಾಡಿದ  ದಿನಚರಿ, ಎಲ್ಲದರ ನೆನಪು,ಮೆಲುಕಾಟ,   ದಿನವೂ ಒಂದಲ್ಲ ಹತ್ತಾರು ಬಾರಿ. ಇದು  ಯಾರದೋ, ಇವರು ಯಾರವರೋ, ಎನ್ನುವ ಮನ, ಇದೂ ನಮ್ಮದು, ಇವರೂ ನಮ್ಮವರು ಅನ್ನಲು ಶುರುವಿಟ್ಟು ಕೊಂಡಿದ್ದು ಎಷ್ಟೋ  ಕಾಲದ  ನಂತರ.

ಮುಚ್ಚಿಕೊಂಡ ಬಾಗಿಲ  ಆಚೆ  ಅದೆಷ್ಟು ಮಾತುಗಳು, ಮುಖಗಳು, ಭಾವಗಳು. ಮನ ತೆರೆದುಕೊಂಡಾಗಲೇ ಅದಕ್ಕೆ  ತುಂಬಿಕೊಳ್ಳುವ ಶಕ್ತಿ. ಬಾಗಿಲ ತೆಗೆದು ಅವುಗಳನ್ನು ಕರೆದು ಮನ ತುಂಬಿಸಿಕೊಂಡಾಗ.   ಅದು  ಆದದ್ದು ಎಷ್ಟು ವಿಸ್ತಾರ. ಭಾಷೆಗಳು ಬೇರೆಯಾದರು  ಮಾತು   ಒಂದೇ, ರೂಪಗಳು  ಬೇರೆಯಾದರು  ಮನಸ್ಸು  ಒಂದೇ, ರೀತಿಗಳು ಬೇರೆಯಾದರು ಭಾವ ಒಂದೇ ಎಂಬ ಅರಿವಿಗೆ,  ಹೊಸ ಜಗತ್ತೇ  ತೆರೆದುಕೊಂಡ ಹರುಷ.  ಆ ಹೊಸ ಜಗತ್ತಿನ ತುಂಬಾ  ಮನೋ  ವಿಹಾರ. ಇಲ್ಲಿ   ಒಂದೊಂದಾಗಿ  ತೆರೆದುಕೊಂಡ  ಪುಟಗಳು  ಎಷ್ಟೋ! ಆ ಪುಟದ ತುಂಬಾ  ಬಿಡಿಸಿದ  ಚಿತ್ರಗಳು, ಅವಕ್ಕೆ  ತುಂಬಿದ ಬಣ್ಣಗಳು,  ಮೂಡಿಸಿದ ಅಕ್ಷರಗಳು, ಅವುಗಳಿಗೆ ಕೊಟ್ಟ ಅರ್ಥಗಳು ಒಂದಲ್ಲ ಹತ್ತಾರು ..... ........

ಈಗ  ದಾರಿಯ ಮುಕ್ತಾಯಕ್ಕೆ  ಬಂದು ನಿಂತು  ಬಿಟ್ಟ ಹೆಜ್ಜೆ. ಕಾಲಕ್ಕೆ ಅದರದ್ದೇ ಆದ  ಮಿತಿ. ನಮಗೆ ನಮ್ಮದೇ ಆದ  ಬಧ್ಧತೆ.  ಇಲ್ಲಿಂದ ಹಿಂದಕ್ಕೆ, ಪೂರ್ವ ಜಗತ್ತಿಗೆ  ಮರಳಲೇ  ಬೇಕು. ಆದರೆ  ಒಂದು  ಖುಶಿ ಎಂದರೆ  ಮರಳುವಾಗ ಜೊತಗೆ, ಒಂದಿಷ್ಟು ಅಮೂಲ್ಯ ಸರಕುಗಳನ್ನಾದರೂ ಒಯ್ಯುತ್ತಿದ್ದೇವಲ್ಲಾ, ಎಂದು. ಎದೆಯ  ಗೂಡೊಳಗೆ ಮತ್ತಷ್ಟು  ಗಟ್ಟಿಯಾಗಿ ಬೆಸೆದ ಚಿಗುರಿನ  ಮಮತೆಯನ್ನ,  ತೆರೆದುಕೊಂಡ  ಹೊಸ ಜಗತ್ತಿನ ಸ್ನೇಹಿತರ   ಬಳಗದ  ಪ್ರೀತಿಯನ್ನ, ಸ್ವರದಿಂದ  ಮುಂದಕ್ಕೆ ಚಲಿಸಿದ  ಆಲಾಪದ ಗುಂಗನ್ನ, ಪುಟಕ್ಕೆ ಇಳಿದ ಮಾತುಗಳಿಗೆ  ಸಾಕ್ಷಿಯಾಗುತ್ತಾ, ಕೊನೆಗೂ  ಪದಗಳ  ರೂಪ  ಕೊಡಲು  ಸೋತ  ಕೆಲವು ಭಾವಗಳನ್ನ.

Monday, January 18, 2010

ಹೇಗೆ ಬಂದು ಹೋಗಿರುವೆ

ನನ್ನೆದೆಯ ಹಾದಿಯಲಿ
ನಿನ್ನ ಹೆಜ್ಜೆ ಮೂಡಿದೆ.
ಯಾವ ಮಾಯದಲ್ಲಿ ನೀನು
ಹೀಗೆ ಬಂದು ಹೋಗಿರುವೆ.

ಪ್ರತಿ ಘಳಿಗೆ ಪ್ರತಿ ಕ್ಷಣವೂ
ಕಣ್ಣoಚಿನಲೇ ನಿನ್ನ ಕಾದು,
ರೆಪ್ಪೆ ಸೋತ ಸಮಯದಲ್ಲಿ
ಹೇಗೆ ಬಂದು ಹೋಗಿರುವೆ.

ನನ್ನೆದೆಯಾ ಬೇಗೆಯ ನೋಡಿ
ಮಳೆಯೆ ಇಳೆಗೆ ಬಂದಿದೆ ಓಡಿ
ಒದ್ದೆ ಕಾಲ ಹೆಜ್ಜೆಯೂ ಮೂಡದೆ
ಹೇಗೆ ಬಂದು ಹೋಗಿರುವೆ.

ಭಾವಗಳ ಕದತೆರೆದು
ನಿನಗಾಗೆ ಕಾಯುತ ಕುಳಿತೆ
ನಿನ್ನುಸಿರ ಸದ್ದೂ ಕೇಳದಹಾಗೆ
ಹೇಗೆ ಬಂದು ಹೋಗಿರುವೆ.

Thursday, January 14, 2010

ಸಂಕ್ರಮಣ

ಕಳೆದು ಹೋದ ನಿನ್ನೆಗಳು ಬಂದು
ನನ್ನೆದೆಯ ಕದ ತಟ್ಟಿದಾಗ ಇನ್ನೂ ಮುಂಜಾವು.
ಕದತೆರೆದು ದೃಷ್ಟಿಹಾಯಿಸಿದುದ್ದಕ್ಕೂ
ಆಗಷ್ಟೆ ಹರಿದ ನಸು ಬೆಳಕಿಗೆ
ಅಂಗಳದ ತುಂಬಾ ಪಾರಿಜಾತ, ಜಾಜಿ, ಸೇವಂತಿಗೆ........
ಒಡಲ ತುಂಬಾ ಹೂವಿನದೇ  ಘಮ.

ಒಂದೊಂದು ಹೂವಿನದೂ ಒಂದೊಂದು ಮಾಟ
ಯಾವ ಮಾಯದಲ್ಲಿ ಇಳೆಗಿಳಿದವೋ ಅವು
ಎದೆಯಾಳದ ವರೆಗೂ ಸವಿಯಾದ ಕಂಪು .
ನೀರ ಹನಿಸಿದ್ದು ನಾನೇ ಎಂಬ ಜಂಭವಿಲ್ಲ
ನೀರ ಸತ್ವ ಹೀರುವ ಶಕ್ತಿ ಹೂವಿಗೆ.

ಎಲ್ಲಿಯ ನೆಲ ಎಲ್ಲಿಯ ಬೀಜ
ಯೋಚಿಸುತ್ತ ಕುಳಿತರೆ ಎಲ್ಲವು ಅಯೋಮಯ
ಇಂದು ಸಕ್ರಾಂತಿ ಹೊಸ ದಿನ ಹೊಸ ಘಳಿಗೆ.
ಸ್ನೇಹಿತರ ಮನೆ ಮನೆಗೆ ಸಿಹಿ ಹಂಚಬೇಕು
ಜೊತೆಗೆ ಹೂವಿನ ಘಮ ಕೂಡಾ

Monday, January 11, 2010

ವ್ಯವಸ್ಥೆ

ಮನೆಗಳು, ಮನೆಗಳು, ಮನೆಗಳು.
ಮಜಬೂತಾದ ಕಿಟಕಿ ಬಾಗಿಲುಗಳು.
ದಪ್ಪ ದಪ್ಪ ಸರಳುಗಳು,
ನಡುವೆ ಸಿಕ್ಕಿ ಹಾಕಿಕೊಂಡಿರುವ
ಸಾವಿರಾರು ತಲೆಬುರುಡೆಗಳು .
ಅವುಗಳ -
ನಡೆ ತಡೆದಿವೆ ಗೋಡೆಗಳು,
ಕೈಗಳ ಬಂಧಿಸಿವೆ ಕತ್ತಲುಗಳು,
ಬಾಯ ಬಿಗಿದಿವೆ ಬೀಗಗಳು,
ನಿಂತಲ್ಲೇ ಒದ್ದಾಟ ಗುದ್ದಾಟಗಳು.
ಅವುಗಳು -
ಹೊರ ಜಿಗಿಯಲು ನಡೆಸಿವೆ ಯುದ್ಧ ,
ಏನೋ ಮುರಿದ ಸದ್ದು,
ಅವು ಕಿಟಕಿ ಬಾಗಿಲುಗಳದೋ
ತಲೆಬುರುಡೆಗಳದೋ
ಅಂತೂ-
ತಪ್ಪಿಸಿಕೊಂಡ ತಲೆಬುರುಡೆಗಳು
ಓಡಿದವು ಕುಂಡಿಗೆ ಕಾಲುಹಚ್ಚಿ,
ದಿಕ್ಕೆಟ್ಟು ಕಂಡ ಕಂಡ ಕಡೆಗೆ,
ಕಾಲ್ತುಳಿತಕ್ಕೆ ಸಿಕ್ಕಿ ನುಜ್ಜು ಗುಜ್ಜಾಗಿ
ಹೋದವೆಷ್ಟೋ  ಉಳಿದವೆಷ್ಟೋ
ಕೊನೆಗೂ -
ಕಿಟಕಿಯ ಸರಳುಗಳು,
ಬಾಗಿಲ ಚೌಕಗಳು,
ಗೋಡೆಗಳು  ಎಲ್ಲಾ  ಸೇರಿ,
ತಲೆಬುರುಡೆಗಳನ್ನೆಲ್ಲಾ   ಎಳೆದೆಳೆದು,
ತಂದು ಪೇರಿಸಿಟ್ಟವು
ಮತ್ತೆ ಮನೆಯೊಳಗೆ.