ಮೋಡದ ಮರೆಯಲ್ಲಿನ ಸೂರ್ಯ ಪಕ್ಕನೆ ಬೆಳಕು ಚೆಲ್ಲಿದ ಹಾಗೆ, ದೂರದ ಸಾಗರದಾಚೆ ಇರುವ ನನ್ನ ರಾಜಕುಮಾರಿಯನ್ನು ಸೇರುವ ವಿಚಾರ ಆಲ್ಮೋಸ್ಟ್ ಪಕ್ಕಾ ಆಗಿತ್ತು . ಎಷ್ಟೋ ದಿನದಿಂದ ಕನಸಾಗಿ ಕಂಡ ಆಸೆ ನನಸಾಗಿತ್ತು . ಮಳೆಗಾಲದ ಬಿಸಿಲಿನಂತೆ ಅದೆಷ್ಟು ಸಾರೆ ಅವಳನ್ನು ನೋಡಲು ಹೋಗುವ ವಿಚಾರ ಆಗಾಗ ಸುಳಿದು ಹೋಗುತ್ತಿದ್ದರೂ ಯಾಕೋ ಅದಕ್ಕೆ ಮೂರ್ತ ರೂಪವೇ ಬಂದಿರಲಿಲ್ಲ .
ನನ್ನ ಹೆಜ್ಜೆಯನ್ನೇ ಅನುಸರಿಸಿ ನನ್ನನ್ನೇ ಹಿಂಬಾಲಿಸುತ್ತಾ ದೂರದ ದಾರಿಯವರೆಗೂ ಬಂದವಳು ಮಧ್ಯ ದಾರಿಯಲ್ಲೆಲ್ಲೋ ತನ್ನ ಗುರಿಯನ್ನು ಅರಸುತ್ತ ದಿಡೀರ್ ಆಗಿ ಸಾಗರದಾಚೆ ಸಿಡಿದವಳು. ಅವಳ ಕಣ್ಣ ಬೆಳಕಲ್ಲೇ ನನ್ನ ಕನಸನ್ನು ಕಂಡು , ಅವಳ ಉಸಿರಾಟಕ್ಕೇ ನನ್ನ ಉಸಿರನ್ನ ಹೊಂದಿಸಿಕೊಂಡವಳಿಗೆ ಅದೆಷ್ಟೋ ಕಾಲ ಉಸಿರಾಡುವುದೇ ಮರೆತ ಅನುಭವ. ನನ್ನ ಸುರಕ್ಷಿತತೆಯ ಭಾವಕ್ಕೆ ಅವಳ ವೇಗದ ನಡಿಗೆಗೆ ತಡೆಯಾಗಲು ಮನಸ್ಸಾಗಲಿಲ್ಲ. ಅವಳ ಸ್ಪೂರ್ತಿಯ ಚಿಲುಮೆಗೆ ನೀರೆರೆಯಲು ಅದೂ ಒಂದು ಕಾರಣವಾಗಿರಬಹುದು . ಅಂದಿನ ನಮ್ಮ ನಿರ್ಧಾರ ಸರಿಯೋ ಅಥವಾ ಸರಿ ಅಲ್ಲವೋ ಎಂಬುದು ನನಗೆ ಇಂದಿಗೂ ತಿಳಿದಿಲ್ಲ .
ಸಾಧನೆಯ ದಾರಿ ಬಲು ದೂರ ಮತ್ತು ದುರ್ಗಮ . ದೂರದ ದಾರಿಗೆ ಬೆದರಿ ಅದೆಷ್ಟು ಕಂಗೆಟ್ಟಿದ್ದಳೋ , ನಡೆಯುವಾಗ ದಾರಿಯಲ್ಲಿರುವ ಕಲ್ಲು ಮುಳ್ಳು ನನ್ನ ರಾಜಕುಮಾರಿಯ ಪುಟ್ಟ ಪಾದಗಳಿಗೆ ಚುಚ್ಚಿ ಅವಳನ್ನು ಅದೆಸ್ಟು ಘಾಸಿಗೊಳಿಸಿತ್ತೋ , ಈ ಎಲ್ಲ ದುಸ್ವಪ್ನಗಳು ನನ್ನನ್ನು ಎಡಬಿಡದೆ ಕಾಡುತ್ತಿದ್ದವು . ಆದರೆ ಈಗ ನನ್ನ ರಾಜಕುಮಾರಿಯನ್ನು ಸೇರುವ ಕಲ್ಪನೆ ಮೂರ್ತ ಗೊಂಡಿದೆ .
ಈಗೆಲ್ಲ ಬಣ್ಣಬಣ್ಣದ ಕನಸುಗಳು. ಈಗ.ಪರಸ್ಪರ ಭಾವನೆಗಳನ್ನು ಹಂಚಿಕೊಂಡು ಹಗುರಾಗುವ ಕಾಲ . ಮತ್ತೆ ಹಿಂದಿನಂತೆ ಹೆಜ್ಜೆಯನನುಸರಿಸುವ ಹೆಜ್ಜೆಗಳು ..................... ಆದರೆ ಈಗ ಯಾರ ಹೆಜ್ಜೆ? ಯಾರ ಅನುಕರಣೆ? .......................... ಖಂಡಿತವಾಗಿಯೂ ನನ್ನ ರಾಜಕಮಾರಿ ಎನ್ನುವ ಮಮಕಾರಕ್ಕೆ ಹೇಳಲಾರೆ . ಈಗ ಅವಳು ಎಷ್ಟು ಬೆಳೆದು ಬಿಟ್ಟಿದ್ದಾಳೆ ಅಂದರೆ ಈಗ ನಾನೇ ಅವಳ ಫಾಲ್ಲೋವರ್. ಆದರೂ ನಾನೇ ಅವಳಿಗಿಂತ ಬಲ್ಲವಳು ಎಂಬ ಹುಚ್ಚು ನಂಬಿಕೆ ಅವಳಿಗೆ . ಈಗಲೂ ಮೊದಲಿನಂತೆ ನನ್ನ ಮಾತನ್ನು ಕಣ್ಣರಳಿಸಿ ಕೇಳುತ್ತಾಳೆ . ನಿನ್ನ ಈ ನಂಬಿಕೆ ಹುಸಿ ಎಂದರೂ ಗಮನವಿಲ್ಲ ಅವಳಿಗೆ . ಅದಕ್ಕೇ ಈಗ ನಾನು ಬೆಳೆಯ ಬೇಕಾದ ಎತ್ತರದ ಬಗೆಗೆ ನನಗೇ ದಿಗಿಲಾಗುತ್ತಿದೆ .
ಅಂದು, ಅದೆಷ್ಟೋ ಕಾಲದ ನಂತರ ಸಂಧಿಸಿದ ನೋಟದಲ್ಲಿ ಯಾವ ಭಾವವಿತ್ತು ? ಮಳೆಗಾಲದಲ್ಲಿ ಉಂಟಾಗುವ ಕಾಮನ ಬಿಲ್ಲಿನಂತೆ ವಿವಿಧ ಬಣ್ಣಗಳು . ಅವು ಬೆರಗ? ಉತ್ಕಟತೆಯ? ಸಂತೋಷವ ? ನನಗೇ ಗೊತ್ತಾಗಲಿಲ್ಲ . ನನ್ನ ಕಣ್ಣು ತುಂಬಿ ಬಂದಿತ್ತು . ಎಲ್ಲವೂ ಹೊಸತು ಎಲ್ಲವೂ ಆನಂದಮಯ. ದಿನ ಕಳೆದಂತೆ ಕಳೆದಂತೆ ಆಡಿದ ಮಾತುಗಳಿಗೆ ನಕ್ಕು ನಗಿಸಿದ ವಿಷಯಗಳಿಗೆ ಕಂಡ ಕನಸುಗಳಿಗೆ ಲೆಕ್ಕ ಇಟ್ಟವರಾರು? ಆದರೆ ಕಾಲ ನಿಂತ ನೀರಲ್ಲವಲ್ಲ . ಒಂಟಿ ದಾರಿಗೆ ಸ್ವಲ್ಪ ದೂರ ಜೊತೆಯಾಗಿ ಬಂದು ಕಾಲ ಮುಗಿಯುತ್ತಿದ್ದಂತೆ ನನ್ನ ಪುಟ್ಟ ರಾಜಕುಮಾರಿಗೆ ಬೈ ಬೈ ಹೇಳುವ ನನ್ನ ಅನಿವಾರ್ಯತೆಯನ್ನ, ಆ ನೋವನ್ನ ಯಾರಲ್ಲಿ ಹಂಚಿಕೊಳ್ಳಲಿ ?
9 comments:
ಚೆ೦ದದ ಬರಹ..
ಹೊಸ ವರುಷ ತರಲಿ ಹರುಷ.
ನವಿರಾದ ಬರವಣಿಗೆ. ಅಗಲುವಿಕೆಯ ನೋವಿನ ಜೊತೆ ಮತ್ತೆ ಒಂದಾಗುವುದರ ಅದಮ್ಯ ಸಂತೋಷ ಬೆರೆತೇ ಇರುತ್ತದೆ ಯುಗಾದಿಯ ಬೇವು ಬೆಲ್ಲದಂತೇ ಅಲ್ಲವೇ?
ಹೊಸವರ್ಷದ ಹಾರ್ದಿಕ ಶುಭಾಶಯಗಳು.
nanna baraha haagu haadige mechchuge soochisi bembalisiddakke dhanyavada madom:)
ಅಗಲಿಕೆ ಯಾವಾಗಲೂ ನೋವು ತರಿಸುತ್ತದೆ. ಒಳ್ಳೆಯ ಬರಹ
ಸುಂದರ ಬರಹ
ನಿರೂಪಣೆ ತುಂಬಾ ಇಷ್ಟವಾಯಿತು
ಇನ್ನಷ್ಟು ಬರಹಗಳ ನೀರೀಕ್ಷೆಯಲ್ಲಿ
Umavatakka,
Raashi Ista aatu payana!! Nijakku tumba enjoy maad de.. Each line of this article is very touchy and well expressed.....
Keep writing.... I love to see more of em...
Love you!!
ಪಯಣವನ್ನು ಮೆಚ್ಚಿ ನನ್ನನ್ನು ಪ್ರೋತ್ಸಾಹಿಸಿದ ಎಲ್ಲಾ ಸಹೃದಯರಿಗೂ ಕೃತಜ್ಞತೆಗಳು.
ಪ್ರೀತಿಯೊಂದಿಗೆ ಉಮಾ
ಪ್ರೀತಿಯ ಅತ್ತೆ,
ಮಾತೃ ಹೃದಯದ ಮಿಡಿತಗಳನ್ನು ಅತ್ಯಂತ ಸುಮಧುರವಾಗಿ ಭಾವ ಪೂರಿತವಾಗಿ ಹೊಳೆಯುವ ಶಬ್ಧಗಳಿಂದ ಸುಂದರವಾಗಿ ಪೋಣಿಸಿದ್ದೆ. ನಿನ್ನ ಪ್ರಬುದ್ಧ ಬರವಣಿಗೆ
ಹೊಸ ಲೇಖನಕ್ಕಾಗಿ ಎದುರು ನೋಡುತ್ತಾ ಇರುವಂತೆ ಮಾಡುತ್ತಿದೆ. ಶುಧ್ಧ ಭಾವನೆಗಳು ಬರಹವನ್ನು ಇನ್ನೂ ಅಂದವಾಗಿಸುತ್ತವೆ. ಮಾತೃ ಪ್ರೀತಿಯ ಶಕ್ತಿ ಅಂಥದ್ದು.
ಸಾಗರಗಳನ್ನು ದಾಟಿ ಉಕ್ಕಿನ ಗೋಡೆಗಳನ್ನು ಭೇದಿಸಿ ಅಲೆಅಲೆಯಾಗಿ ಸಂಚರಿಸುತ್ತ ಆತ್ಮೀಯರನ್ನು ಸ್ಪಂದಿಸುತ್ತಿರುತ್ತವೆ. ನಿತ್ಯ ನೂತನವಾಗಿ
ಹೃನ್ಮನಗಳಿಗೆ ಅಮೃತ ಸಿಂಚನಗೊಳಿಸುತ್ತಿರುತ್ತವೆ.
- ಶಿವರಾಮ ಭಟ್
ಶಿವಣ್ಣಾ ನಿನ್ನ ಶಬ್ದ ಸಂಪತ್ತಿಗೆ ಬೆರಗಾಗಿದ್ದೇನೆ. ನೀ ನನ್ನ ಬರಹದ ಮೇಲಿಟ್ಟ ಭರವಸೆಗೆ ಏನೆನ್ನಲಿ?
ಒಂದಿಷ್ಟು ಪ್ರೀತಿಯೊಂದಿಗೆ
ಅತ್ತೆ
Post a Comment