Thursday, March 15, 2012

ಮಾತು, ಮಾತು, ಮಾತು.....


ಒಂದೊಂದು ಸಲ   ಸಲ ನಾನೊಬ್ಬಳೇ ಮಾತಾಡುತ್ತಿದ್ದೆ.  ಆಗ ನನ್ನ  ಮಾತುಗಳನ್ನು ಅವನು ತನ್ನ ಕಣ್ಣುಗಳಲ್ಲಿ ತುಂಬಿ ಕೊಳ್ಳುತ್ತಿದ್ದ.  ಇನ್ನು ಬಹಳಷ್ಟು ಸಲ  ಅವನು  ಯಾವುದ್ಯಾವುದೋ  ವಿಷಯದ ಮೇಲೆ ಬಹಳ ಗಂಭೀರವಾಗಿ  ಮಾತನಾಡುತ್ತಿದ್ದ. ಅದರಲ್ಲಿ ಬಹಳಷ್ಟು ವಿಷಯಗಳು  ನನ್ನ ತಲೆಯ ಮೇಲಿಂದಲೇ  ಹಾದು  ಹೋಗುತ್ತಿದ್ದವು.  ಆಗ ನಾನು ಅವನ ಮುಖವನ್ನಷ್ಟೇ   ನೋಡುತ್ತ  ಕುಳಿತು ಬಿಡುತ್ತಿದ್ದೆ. ಅದು ಬಹುಶಃ ಅವನಿಗೂ ಗೊತ್ತಾಗುತ್ತಿತ್ತೋ  ಏನೋ......    ಬಹಳ  ಸಲ  ಅವನ ಪಾಂಡಿತ್ಯ ನನ್ನಲ್ಲಿ ಬೆರಗನ್ನು ಹುಟ್ಟಿಸುತ್ತಿದ್ದವು. ಇನ್ನೂ  ಬಹಳ  ಸಲ ಅವನ ಮಾತುಗಳು ನನಗೆ ಬಿಡಿಸಲಾರದ ಪ್ರಶ್ನೆಯಾಗಿ ಬಿಡುತ್ತಿದ್ದವು. ಕೆಲವೊಂದು   ಸಲವಂತೂ   ಅವನ ಮಾತುಗಳು ನನ್ನ ಕರ್ಣ ಪಟಲವನ್ನು ದಾಟಿ, ಅವು   ಭಾವ ತಂತುಗಳ ವರೆಗೂ ಮುಟ್ಟಿ ಅಲ್ಲಿ ಸೂಕ್ಷ್ಮ ತರಂಗ ಗಳನ್ನೇ   ಉಂಟುಮಾಡುತ್ತಿದ್ದವು. ಹೀಗೆ ಅವನ ಮಾತಿಗೆ ಒಮ್ಮೆ  ಆಶ್ಚರ್ಯ ಪಡುತ್ತ,   ಬೆರಗಾಗುತ್ತ,  ಮತ್ತೊಮ್ಮೆಅವನ ಮಾತು ನನಗೆ    ಪ್ರಶ್ನೆಯಾಗುತ್ತ  ಮಗದೊಮ್ಮೆ ಉತ್ತರವಾಗುತ್ತ  ಎಷ್ಟೋ ಸಲ   ಅವನ ಮಾತಿಗೆ ನಾನೇ  ಭಾವವಾಗುತ್ತಾ   ನನ್ನ ಮುಗ್ಧ  ಪ್ರಪಂಚ ವಿಸ್ತಾರ ವಾಗಿಬೆಳೆದಿತ್ತು. ಅಭ್ಭಾ ಆಗಲೇ ಅದೆಂಥಾ ಅದ್ಭುತ ಜಗತ್ತನ್ನು ಅವನು ತನ್ನ ಸುತ್ತ ನಿರ್ಮಿಸಿಕೊಂಡಿದ್ದ .ದಿನಗಳು ಋತುಗಳು ಕಳೆದಂತೆ ಅವನ ವೈಚಾರಿಕ ಪ್ರಖರತೆ     ಇನ್ನೂ ಇನ್ನೂ ಬೆಳಗುತ್ತಾ  ಇತ್ತು   ಅಂತಲೇ  ನನ್ನ ಭಾವನೆ......................

ಪಠಯ್     ಪಾಠಗಳಿಂದ  ಹೊರ ಇಣುಕಿ ಸುತ್ತ  ದೃಷ್ಟಿ ಹಾಯಿಸಿದಾಗ    ಗೋಚರಿಸಿದ್ದು  ' ಚಂದ ಮಾಮಾ' .  ಆಗ  ಅದೇ ಒಂದು ದೊಡ್ಡ ಜಗತ್ತು. ಅಲ್ಲಿಯೇ  ಅದೆಷ್ಟೋ ವಸಂತಗಳು. ಅಲ್ಲಿಂದ ಮುಂದು  ಹೋಗಲಿಕ್ಕೇ   ಗೊತ್ತಾಗದ ಆ ಕಾಲ. ಅಲ್ಲಿಂದ ಮುಂದೆ  ಸರಿದದ್ದು  ಯಾವಾಗ?   ಕ್ಲಾಸಲ್ಲಿ ಪಾಠ ನಡೆಯುತ್ತಿದ್ದ ಸಮಯ, ಸ್ನೇಹಿತೆಯ ಪಟ್ಯ ಪುಸ್ತಕದಿಂದ ಜಾರಿಬಿದ್ದ  ಪ್ರೇಮಭರಿತ  ಕಾದಂಬರಿ. ಆಮೇಲೆ ಅದೆಷ್ಟೋ ವರ್ಷಗಳವರೆಗೂ  ಮನಸ್ಸನ್ನ  ಕಟ್ಟಿ ಹಾಕುವ  ಅದೇ ದಾರಿಯ  ಪಯಣ.  ನಾಯಕ ಧರಿಸಿದ  ತುಂಬು ತೋಳಿನ ಶರ್ಟು.  ನಾಯಕಿಗೊಪ್ಪುವ  ತಿಳಿ  ಬಣ್ಣದ ರೇಷ್ಮೆ ಸೀರೆ ,ಅವಳು ಮುಡಿದ ಕನಕಾಂಬರ, ಮಲ್ಲಿಗೆ ಮಾಲೆ.  ಪ್ರೀತಿ ಪ್ರಣಯ  ಇಂಥಹ  ಸಾಹಿತ್ಯದ್ದೇ ದರ್ಬಾರು. ಸಾಹಿತ್ಯ ವೆಂದರೆ  ಇವಿಷ್ಟೇ ಎಂಬ ತಿಳುವಳಿಕೆ. ಆ ಕಾಲಘಟ್ಟದಲ್ಲೇ  ಅವನ ಮಾತುಗಳು ನನ್ನ ಸೆಳೆದದ್ದು. ಆಗ ಅಲ್ಲಿ  ಅವನ ಮಾತಿಗೆ ಸೆಳೆತ ಮಾತ್ರ ವಿರಲ್ಲಿಲ್ಲ . ಅಲ್ಲಿ ಎಷ್ಟು ಗೊಂದಲವಿತ್ತು  ಅಂದರೆ,  ಮೊದಮೊದಲು  ಅವನ ಮಾತುಗಳು  ಅರ್ಥವೇ ಆಗುತ್ತಿರಲಿಲ್ಲ. ಇದು ಬದುಕ? ಇದು ಸಾಹಿತ್ಯವಾ? ಸಾಹಿತ್ಯ ಬದುಕು ಒಂದೇನಾ? ಅಥವಾ ಬೇರೆ ಬೇರೆನಾ? ಸಾಹಿತ್ಯದೊಳಗೆ ಬದುಕಾ?  ಬದುಕಿನೊಳಗೆ ಸಾಹಿತ್ಯವಾ? ಏನೇನೆಲ್ಲಾ ಪ್ರಶ್ನೆಗಳನ್ನು  ಮನದಲ್ಲಿ  ತುಂಬಿಕೊಂಡು  ಅವನ ಮುಖವನ್ನೇ ದಿಟ್ಟಿಸುತ್ತಿದ್ದೆ. ಆಗ  ಅವನ ಮಾತುಗಳು  ಎಷ್ಟು  ಅರ್ಥ ವಾಗುತ್ತಿತ್ತೋ ಬಿಡುತ್ತಿತ್ತೋ  ಆದರೆ ಈ ವಿಸ್ತಾರವಾದ ಹೊಸಪ್ರಪಂಚಕ್ಕೆ ಧುಮುಕುವ ಅದಮ್ಯ ಆಸೆ .   ದಿನಕ್ಕೊಂದು ವಿಚಾರ, ದಿನಕ್ಕೊಂದು ವಿಶ್ಲೇಷಣೆ. ಜೀವನದ ಎಲ್ಲಾ ಮಗ್ಗಲುಗಳನ್ನೂ ತಡಕಿ ತಡಕಿ ಬಗೆದು ಬಗೆದು ಅದರ ಆಳ ಅಗಲಗಳನ್ನು  ಒರೆಗೆ ಹಚ್ಚುವ ಅವನ ಮಾತುಗಳು  ಅಂದರೆ  ಏನೋ ಹೊಸತನ್ನು ಪಡೆದ ಸಂಭ್ರಮ. ಆ ಮಾತು ಕಥೆಗಳ ನಡುವೆಯೇ   ನುಸುಳುವ  ಒಂದೊಂದು ಮುಗ್ಧ  ಪ್ರಶ್ನೆ . ಅಂಥ  ಬಾಲಿಶ ಮಾತುಗಳು ಅವನಿಗೆ ನಗು ತರಿಸುತ್ತಿತ್ತಾ?    ಈಗಲೂ  ನೆನಪಿದೆ. ಒಂದುದಿನ  ಅವನು ಓಶೋನ   ದೃಷ್ಟಿಯಲ್ಲಿ ಆಸೆ, ಬದುಕು ಅದರ ಬಗ್ಗೆ  ಬಹಳ  ಆಳವಾಗಿ ಮಾತನಾಡುತ್ತಿದ್ದ.   ಅದು ನನಗೆ  ಕಬ್ಬಿಣದ ಕಡಲೆ ಅಂತ  ಅನಿಸಿರಬೇಕು.  ಥಟ್ಟನೆ ಹೇಳಿದೆ  ಈ ವಿಷಯದಲ್ಲಿ  ಬುಧ್ಧನ ವಿಚಾರಗಳೇ ಹೆಚ್ಚು ಪ್ರಿಯ. ಬುಧ್ಧ  ಎಷ್ಟು ಸರಳವಾಗಿ ಹೇಳಿದ್ದಾನೆ ಆಸೆಯೇ ದುಃಖಕ್ಕೆ ಕಾರಣ  ಎಂದು. ಬುಧ್ಧನ ವಿಚಾರದಲ್ಲಿ ಬದುಕನ್ನ ಫಾಲೋ ಮಾಡಿದರೆ  ಬದುಕು ಎಷ್ಟು ಸುಂದರ ಅಲ್ವೇ.....  ಆಗ ಥಟ್ಟನೆ ಅವನ  ಉತ್ತರ ಬಂತು. ಆಸೆ, ಬದುಕು ಎನ್ನುವದೆಲ್ಲ  ಬುಧ್ಧ ಹೇಳಿದಷ್ಟು ಸರಳವಾಗಿದ್ದಿದ್ದರೆ ........ ..............

ಕಾಲ ಸರಿದು ಬೆಳಗು ಹಗಲಾಗುವ  ಸಮಯ.  ಮುಗ್ಧ ಭಾವಕ್ಕೆ ಪ್ರೌಢತೆಯ ಮೆರಗು.  ಬದುಕಿಗೆ ತನ್ನದೇ ಒಂದು ಪರಿಧಿಯನ್ನು  ಕಟ್ಟಿಕೊಳ್ಳುವ  ಸಂದರ್ಭ  ಮತ್ತು  ಸಂಭ್ರಮ .

ಅವನು ಹರವಿಟ್ಟ ಮಾತುಗಳು   ಪುಟ್ಟ ಬೊಗಸೆಗಳಲ್ಲಿ  ಎಷ್ಟು ಸೋರಿ ಹೊಗಿತ್ತೋ  ಎಷ್ಟು ಉಳಿದುಕೊಂಡಿತ್ತೋ ....... ಉಳಿದುಕೊಂಡ ಮಾತುಗಳೆಲ್ಲಾ  ಮುತ್ತುಗಳೇ  ಎಂಬ   ಭಾವ.

 ಕೆಲವೊಮ್ಮೆ  ಬದುಕಿನ  ತಿರುವಿನಲ್ಲೆಲ್ಲೋ   ಚಲಿಸುವ  ಹೆಜ್ಜೆ ಒಂದು ಕ್ಷಣ ನಿಂತು ಬಿಟ್ಟಿದೆಯೇನೋ   ಎಂದು ಗಾಬರಿಯಾದಾಗ    ಅವನಾಡಿದ   ಮಾತುಗಳ  ಮಿಂಚು.

ಮದ್ಯಾಹ್ನದ ಬಿಸಿಲಿಗೆ ಪ್ರಖರತೆ ಹೆಚ್ಚು. ಆ ಪ್ರಕಾಶಕ್ಕೆ ಎಷ್ಟೊಂದು  ಹೊಳಪು.  ಆದರೆ ಬಿಸಿ ಇಳಿದು  ಸಂಜೆಯ ತಂಪು ಆವರಿಸುತ್ತಿದ್ದಂತೆ  ಅಲ್ಲಿ  ಪ್ರಕಾಶವೂ ಕಡಿಮೆ. ಹೊಳಪೂ  ಕಡಿಮೆ.

ಇಂಥದ್ದೇ  ಒಂದು ಥಣ್ಣನೆಯ ಸಂಜೆಯಲಿ ಮತ್ತೆ  ಅದೇ   ಅವನೆದುರಿಗೇ  ಕುಳಿತು  ಅವನ ಮಾತುಗಳನ್ನ  ಕೇಳಿಸಿ ಕೊಳ್ಳುವ   ಆಕಸ್ಮಿಕ   ಸಂದರ್ಭ.   ಅಲ್ಲಿ ಅವನಿಂದ  ಅದೇ.........   ಮಾತುಗಳು  ......     ಭೂತ  ಭವಿಷ್ಯಗಳನ್ನು ವೈಚಾರಿಕ   ದ್ರವದೊಳಗೆ  ಅದ್ದಿ  ಅದ್ದಿ  ಮುಳುಗಿಸಿ    ಅದನ್ನು ಜೋಪಾನವಾಗಿ  ಎತ್ತಿಡುವ  ಅವನ  ಮಾತುಗಳು.   ಸಮಯದ  ಪರಿವೇ  ಇಲ್ಲದ  ಅವನ  ಮಾತುಗಳು.    ಆದರೆ  ಈ ಸಲ  ಯಾಕೋ  ಅವನ  ಮಾತುಗಳ ಬಗ್ಗೆ  ಬೆರಗಾಗಲಿ    ಆಶ್ಚರ್ಯವಾಗಲಿ  ಪ್ರಶ್ನೆಗಳಾಗಲಿ   ನನ್ನಲ್ಲಿ   ಹುಟ್ಟಲೇ  ಇಲ್ಲಾ.  ಯಾಕೋ    ನನ್ನೊಳಗೆಲ್ಲ   ಬರೇ ಮೌನವೇ.   ಅವನಿಗೇ   ಬೆರಗಾಗಿರಬೇಕು   ಕೇಳಿದ .  ಎಲ್ಲಿ ನಿನ್ನ ಮಾತುಗಳೆಲ್ಲಾ   ಎಲ್ಲಿ ಹೋದವು ?.............. ....ಅವನ ಪ್ರಶ್ನೆಗೂ  ಉತ್ತರಿಸಬೇಕು  ಅಂತ  ಅನ್ನಿಸಲಿಲ್ಲ  .  ಆದರೆ  ಮನಸ್ಸು  ತನ್ನಷ್ಟಕ್ಕೇ  ಕೇಳಿಕೊಂಡಿತು.  ಬದುಕಿಗೆಷ್ಟು ಮಾತು  ಬೇಕು ?   "ಭೂತವಂತೂ ಕಣ್ಮುಚ್ಚಿ ಮಲಗಿರುತ್ತದೆ. .   ಭವಿಷ್ಯ ಕಣ್ ತೆರೆದೇ  ಇರುವದಿಲ್ಲ ., ಇನ್ನು ವರ್ತಮಾನಕ್ಕೆಷ್ಟು   ಮಾತುಗಳು????

Wednesday, March 7, 2012

ದಾರಿ .........

ಎಷ್ಟು ದೊಡ್ಡ ದೊಡ್ಡ  ರಸ್ತೆಗಳು  ಅಕ್ಕ ಪಕ್ಕ ಮರಗಿಡಗಳು.
ತಂಪಾದ ಗಾಳಿ, ಒಮ್ಮೊಮ್ಮೆ ಹಿತವಾದ  ಬಿಸಿಲು.
ಕೆಲವೊಮ್ಮೆ  ಉರಿ ಬಿಸಿಲೂ. ಮಳೆ ಗಾಳಿಯೂ.

ಮಧ್ಯದಲ್ಲಿ   ಅಲ್ಲಲ್ಲಿ   ತಗ್ಗು,  ಹೊಂಡ,  ದಿನ್ನೆಗಳು.
ಇದು ಕಾಲು ದಾರಿಯೇನೋ ಅನ್ನುವ ಭಾವ.
ನಡೆದದ್ದು  ಅದೆಷ್ಟು  ದೂರವೋ..........................

ಮೈಲಿಗಲ್ಲೇ  ಇಲ್ಲದ ರಸ್ತೆ.
ಕಾಲಿನ ಕಸುವೇ  ಹೇಳ ಬೇಕು.
ನಡೆದ ದಾರಿ  ಎಷ್ಟು?  ನಡೆವ  ದೂರ  ಎಷ್ಟು ಎಂದು?

ಅಲ್ಲಲ್ಲಿ ಸಿಕ್ಕವರದ್ದೇ  ಜೊತೆ.
ಬಿಟ್ಟರೆ ಒಂಟಿ  ಪಯಣವೇ.
ಯಾರನ್ನೋ  ಸಿಕ್ಕವರ ಕೇಳಿದರೆ ಮುಂದೇನುಂಟು?

ಹೇಳುತ್ತಾರೆ  ಅವರವರ  ಅನುಭವ.
ಮುಂದೆ  ಸಿಗುವುದೇ  ದೊಡ್ಡ  ಬಯಲು.  ಅಲ್ಲಲ್ಲ  ಆಲಯ.
ಕೆಲವರು ಹೇಳುತ್ತಾರೆ.  ಈ ರಸ್ತೆಯೇ  ತುದಿ. ಮುಂದೆ   ಶೂನ್ಯ.......

ಯಾರಿಗೆ  ಗೊತ್ತು, ಮುಂದೇನುಂಟು ಮುಂದೇನಿಲ್ಲಾ  ಎಂದು
ನಾವೇ ನಡೆಯ ಬೇಕು. ನಾವೇ  ನೋಡ ಬೇಕು.
ನಾವೇ  ಸಾಯ ಬೇಕು  ಸ್ವರ್ಗ ಕಾಣಬೇಕು.


Wednesday, January 26, 2011

ಸ್ವಾಗತ

ಹೊಸ ವರುಷವೆ ಬಾ,
ಹೊಸ ಭಾವದಿ, ಹೊಸ ರಾಗದಿ, 
ಹೊಸ ಹರುಷದಿ ಬಾ. 


               ನವ ವಧುವಿನ ಲಜ್ಜೆಯಾಗಿ ಬಾ, 
               ಗೆಜ್ಜೆ ನಾದದ ಸವಿ ದನಿಯಾಗಿ ಬಾ.


ಸಜ್ಜನರ ಎದೆಯ ಹೆಜ್ಜೇನಾಗಿ ಬಾ,
ಹೆಜ್ಜೆ ಇಡುತ ಸಡಗರದಿ ಬಾ.


               ಮುಗ್ಧ ಮಗುವಿನ ನಗೆಯಾಗಿ ಬಾ,
               ಸ್ನಿಗ್ಧ ಭಾವದ ಒಲವಾಗಿ ಬಾ.

ಬಾನಿಂದ ಭುವಿಗೆ ಸುರಿವ ಧಾರೆಯಾಗಿ ಬಾ, 
ರಾಗ ತಾಳದ ತನನವಾಗಿ ಬಾ. 


               ಮೊಗ್ಗು ಬಿರಿವ ಸಂಭ್ರಮವಾಗಿ ಬಾ,
               ದುಂಬಿಯ ಝೇಂಕಾರವಾಗಿ ಬಾ. 


ಅಧರದ ಮಧುವಾಗಿ ಬಾ,
ಎದೆಯಿಂದ ಎದೆಗೆ ಹರಿವ ಹಾಡಾಗಿ ಬಾ.


               ಇನಿಯಳ ಪಿಸುಮಾತಾಗಿ ಬಾ, 
               ಬಾಳಿಗೆ ಚೈತನ್ಯವಾಗಿ ಬಾ.


ಕತ್ತಲನು ತೊಳೆವ ತಾರೆಯಾಗಿ ಬಾ, 
ಎತ್ತೆತ್ತಲೂ ನೀನೇ ನೀನಾಗು ಬಾ.  

Tuesday, December 7, 2010

ಉಪವಾಸ ಹಾಕಿದ್ರೆ!

ಹಳ್ಳಿಯಲ್ಲಿರುವ  ನನ್ನ ಸ್ನೇಹಿತೆಯ ಮಗಳು ತನುಜಾ ಬೆಂಗಳೂರೆಂಬ ಈ ಮಹಾನಗರಿಯಲ್ಲಿ  ಒಬ್ಬ  ಸಾಪ್ಟವೇರ್  ಇಂಜೀನಿಯರ್.  ನನ್ನ ಸ್ನೇಹಿತೆ ಫೋನ್ ಮಾಡಿದಾಗಲೆಲ್ಲ ಹೇಳೋವ್ಳು.'' ನಿನ್ನ ನದ್ರಿಗೆ ಯಾವುದಾದ್ರು ಒಳ್ಳೆ ಹುಡುಗ ಬಿದ್ರೆ ನಮ್ಮನೆ ತನುಜಾ  ನಿನ್ನ ಲಕ್ಷ್ಯದಲ್ಲಿರಲೆ ಮಹರಾಯ್ತಿ''  ಎಂದು.  ಸಹಜವಾಗಿ ನನ್ನ ಸ್ವಭಾವವೂ ಅದೇ.ಯಾವುದಾದ್ರು ಹುಡುಗ ಹುಡುಗಿಯರು ನನ್ನ ಕಣ್ಣೆದುರಿಗೆ ಸುಳದ್ರೆ "ಇವರಿಬ್ಬರದು ಒಳ್ಳೆ ಪೇರ್ ಆಗಬಹುದಿತ್ತೇನೋ"  ಅಂತ ನನ್ನ ಮನಸ್ಸು ಲೆಖ್ಖ ಹಾಕಲು ಶುರು ಮಾಡುತ್ತದೆ. ಅಂತಾದ್ರಲ್ಲಿ  ನನ್ನ  ಆಪ್ತ ಸ್ನೇಹಿತೆಯ ಕೊರಗು ನನ್ನ ತಟ್ಟದೆ ಇರಲು ಸಾಧ್ಯಾನಾ? ಆದ್ರೆ ತೆಳ್ಳಗೆ ಬೆಳ್ಳಗೆ ಇರೋ ಈ ಹುಡುಗಿಗೆ,  ಸರಿ  ಹೊಂದುವಂತ   ಒಬ್ಬ ಹುಡುಗನೂ ನನ್ನ ಕಣ್ಣಿಗೆ ಬಿದ್ದಿರಲಿಲ್ಲ.

ಅಕಸ್ಮಾತ್ತಾಗಿ ಈಗೊಂದು ವಾರದ ಹಿಂದೆ  ನಮ್ಮ ಪರಿಚಯದ ಹುಡುಗನೊಬ್ಬ ಯಾವುದೋ ಕೆಲಸದ ಮೇಲೆ ನಮ್ಮ ಮನೆಗೆ ಎರಡು ದಿನದ ಮಟ್ಟಿಗೆ  ಬಂದಿದ್ದ.  ಅವನು ಬಂದ  ಮೊದಲ ದಿನ ಯಾವ ಹುಡುಗಿಯರೂ ನನ್ನ ಮನಸಿನೆದುರಿಗೆ   ಬರಲಿಲ್ಲ.  ಆದರೆ ಮರುದಿವಸ ಆ ಹುಡುಗನ  ನಡತೆ ನೋಡುತ್ತಿದ್ದಂತೆ  ಒಂದು ಮನಸ್ಸು...... ತನುಜಾಂಗೆ  ಈ  ಹುಡುಗ  ಆದ್ರೂ  ಆಗಬಹುದಿತ್ತು. ಹುಡುಗನ ರೂಪಕ್ಕಿಂತ ಗುಣ ಮುಖ್ಯವಲ್ವೆ ಏನು ಮಾಡೋದು?  ಏನು ಮಾಡೋದು?  ಅಂತ  ನನ್ನ  ಮನಸ್ಸು ನನ್ನನ್ನೇ  ಒಪ್ಪಿಸಲು ಶತ ಪ್ರಯತ್ನ ಮಾಡಿತ್ತು. ಆದ್ರೆ  ತನುಜಾ '' ಅಯ್ಯೋ ಆಂಟಿ ಇವನೂ ಮದುವೆ ಗಂಡಾ?" ಅಂತ ಕೇಳಿಬಿಟ್ರೆ ಅಂತಾನೂ ಭಯವಾಯ್ತು .  ಆದ್ರೂ  ಧೈರ್ಯ ಮಾಡಿ ತನುಜಾಂಗೆ ನಮ್ಮ ಮನೆಗೆ  ಬರಲು ಹೇಳಿಬಿಟ್ಟೆ.  ಮತ್ತೆ ಸಾಧ್ಯವಾದಷ್ಟೂ ಆ ಹುಡುಗನ ರೂಪ ಸ್ವಭಾವಗಳನ್ನೆಲ್ಲ  ಫೋನಲ್ಲೇ ಅವಳಿಗೆ ವಿವರಿಸಿದೆ.

ಸರಿ, ತನುಜಾ ನಮ್ಮನೆಗೆ ಬಂದ್ಲು. ನನಗೋ ಎದೆಯಲ್ಲಿ ಢವ ಢವಾ.  ಪಾಪ ಆ ಹುಡುಗನಿಗೆ ನಾನು ಏನೂ ಹೇಳಿರಲಿಲ್ಲ. ಸ್ವಲ್ಪ ಹೊತ್ತು ನಾವು ಮೂವರೂ ಲೋಕಾಭಿರಾಮವಾಗಿ  ಮಾತಾಡಿದೆವು.  ನಾನು ಟೀ ಮಾಡಲು ಒಳಗೆ ಬಂದೆ.  ತನುಜಾನೂ ನನ್ನ ಹಿಂಬಾಲಿಸಿದಳು.  "ಸಾರೀ....... ತನುಜಾ,  ಹುಡುಗ ಒಳ್ಳೆಯವನು ಆದ್ರೆ  ಏನ್ ಮಾಡ್ತೀಯಾ, ..... ...  ನಿನ್ನ ಅಮ್ಮಂಗೆ  ಹೇಳಿದ್ರಂತೂ ಈಗ್ಲೇ  ನನಗೆ  ಒಂದು ಗತಿ  ಕಾಣಿಸಿ ಬಿಡ್ತಾಳೆನೊ  ಅಲ್ವನೆ"  ಅಂದೆ.  ಅದಕ್ಕೆ ಅವಳು "ಅಯ್ಯೋ  ಬಿಡಿ ಆಂಟಿ, ಹುಡುಗನ  ನೋಡಿದ್ರೆ  ಮತ್ತೆಲ್ಲಾ ಓಕೆ ಅನಿಸ್ತಾನೆ.   ಇನ್ನು  ದಪ್ಪಾನಾ......ನಾಲ್ಕು ದಿವಸ  ಉಪವಾಸ ಹಾಕಿದ್ರೆ ಎಲ್ಲಾ ಸರಿ  ಆಗ್ತಾನೆ.  ಅದಕ್ಯಾಕೆ  ಯೋಚನೆ ಮಾಡ್ತೀರಾ?"  ಎಂದು ಹೇಳಿದಾಗ ಒಂದು ಕ್ಷಣ  ನಾನು    ತಬ್ಬಿಬ್ಬುಗೊಂಡೆ. ಆದರೆ   ಅವಳ ಧನಾತ್ಮಕ  ಪ್ರತಿಕ್ರಿಯೆ ನನಗೆ  ತುಂಬಾ ತುಂಬಾ ಖುಷಿ  ಕೊಟ್ಟಿತು.

Wednesday, September 8, 2010

ಸವಿಗನಸು



ನೀ ಬರುವ ಸಮಯದಲಿ ಮಳೆಯು ಸುರಿಯುತಲಿರಲಿ
ಮಿಂಚಾಗಿ ನಿನ್ನ  ಅಲೆಯು   ನನ್ನ ಸೇರಲಿ

ಮನದ ಅಂಗಳ ತುಂಬಾ ನಿನ್ನ ನೆನಪಿನ  ಬಳ್ಳಿ
ಚಿಗುರಿ ಟಿಸಿಲೊಡೆದು ಮನೆಗೆ ಹಬ್ಬಲಿ

ನಿನ್ನ ಮನದಲಿ ಮೂಡಿದ  ಪ್ರೀತಿಯ  ಮೊಗ್ಗು
ನನ್ನೆದೆಯ ಬನದಲ್ಲಿ  ಹೂವಾಗಿ  ಅರಳಲಿ.

ನೀ ಬರುವ  ದಿಕ್ಕಿನಲಿ  ನಲ್ಮೆಯ ಗಾಳಿಯು ಬೀಸಿ
ನನ್ನೀ  ಬನವೆಲ್ಲಾ ಘಮಘಮಿಸಲಿ.

ನಿನ್ನ  ಗೆಜ್ಜೆಯ ನಾದ ನನ್ನ ಕಿವಿಯಲಿ ಮೊಳಗಿ
ನನ್ನುಸಿರೇ ಗಾನದ ಹೊನಲಾಗಲಿ.

ನಿನ್ನ ಸವಿ ಮಾತುಗಳೆಲ್ಲ ಆಗಸದೆತ್ತರ ಏರಿ
ಅಲ್ಲೇ ಮೋಡಗಳಾಗಿ  ನನ್ನೆಡೆಗೇ  ಸುರಿಯಲಿ.

ನಿನ್ನ  ನೆನಪುಗಳೆಲ್ಲಾ  ಮಳೆಯ ಮುತ್ತುಗಳಾಗಿ
ಈ ಜಗದ ತುಂಬೆಲ್ಲಾ ಹೊಳೆಯಾಗಿ ಹರಿಯಲಿ.

Saturday, July 10, 2010

ಆಯೀ

ಆಯೀ,
ನಿನಗೆ ಪತ್ರಿಸಬೇಕು
ಅನ್ನೋ ನನ್ನ ಸಿದ್ಧತೆಗೇ
ಎಷ್ಟೊಂದು ಹಗಲು ರಾತ್ರಿಗಳಾದವು,
ರಾತ್ರಿಗಳು  ಹಗಲಾದವು.
Sorry, ಆಯೀ.

"ನನಗೀಗ ನಿದ್ದೆಯ ಹಂಗಿಲ್ಲ,
ಕಿಶೋರನ ನೆನಪಿದೆಯಲ್ಲ"
ಎಂದು ಬರೆದಿದ್ದೆಯಲ್ಲ,
ಒಳ್ಳೆ  ಆಯೀ ನೀನು.

ಆಯೀ,
ನಿನ್ನ ಈ ಪುಟ್ಟನಿಗೆ 
ಎಷ್ಟೊಂದು ದಿನದಿಂದ ಕಾಡುತ್ತಿತ್ತು
ಹಾಳಾದ ನೆಗಡಿ ಕೆಮ್ಮು. 
ನನಗೆ ಮರೆತೇ ಹೋಗಿತ್ತು  ನೋಡು 
ನೀನು ಕಟ್ಟಿ ಕೊಟ್ಟ ಹಿಪ್ಪಲಿ ಪುಡಿ, ಜೇನುತುಪ್ಪ. 
ಅದನ್ನು ಹಾಕಿದ ಮೇಲೆಯೇ 
ಕಿಶೋರ ಆರಾಮಾಗಿದ್ದು, 
ಮತ್ತೆ  ಅದನ್ನೇ ಚಿಂತೆ ಮಾಡ್ತಾ ಕೂಡ್ರಬೇಡ. 

ಆಯೀ, 
ಹೇಗಿದೆ ನಿನ್ನ ಬೆನ್ನಿನ ನೋವು
ಎಂದೆಲ್ಲ  ನಾನು ಕೇಳುವುದಿಲ್ಲ ಬಿಡು. 
ಬೆಳಿಗ್ಗೆಯಿಂದ ಮಧ್ಯರಾತ್ರಿಯವರೆಗೂ
ಅಡಿಕೆ ಸುಲಿಯುವ ಸಡಗರ ನಿನಗೆ. 
ಅಂಗಳದ ಮೂಲೆ ಮೂಲೆಯಿಂದಲೂ 
ನುಗ್ಗಿ ಬರುವ ಛಳಿಗೂ ನಿನ್ನ ಬೆನ್ನ 
ಸವರುವ  ಧೈರ್ಯವಿಲ್ಲ.  
ಇನ್ನು,  ಆ ನೋವು ನಿನಗ್ಯಾವ ಲೆಖ್ಖ  ಹೇಳು? 

ಮತ್ತೆ ಆಯೀ, 
ಅಪ್ಪನ ಮಂಡಿ ನೋವನ್ನ ನೆನೆಸಿ ನೆನಸಿ 
ಗುಟ್ಟು ಗುಟ್ಟಾಗಿ ಕಣ್ಣೀರು ಸುರಿಸುತ್ತ ಕೂಡ್ರಬೇಡ. 
ಪಾಪ, ಅನಾರೋಗ್ಯದ ಸೈನ್ಯವೇ ಅವನ ಮೇಲೆ ದಾಳಿ ಇಟ್ಟಿದೆ.
ಆದರೂ ಅವನ ಜೀವನ ಪ್ರೀತಿ 
ಉತ್ಸಾಹ ನೋಡು, 
ಅದನ್ನು ನೋಡಿಯಾದರೂ ಖುಷಿಪಡು ಆಯೀ. 

ಆಯೀ,
ಇಂದು ಏನಾಯ್ತು ಗೊತ್ತ?
ಅಡಿಗೆ ಮಾಡುತ್ತಿದ್ದೆ.
ಸಾರಿನ ಪುಡಿಯ ಡಬ್ಬ ತೆಗೆದರೆ 
ಖಾಲಿಯಾದ ಡಬ್ಬ  ನನ್ನ ಮುಖ ನೋಡಿ ನಕ್ಕಿತು.
ನೀ ಮಾಡಿಕೊಟ್ಟ ಹುಳಿಪುಡಿ, ಚಟ್ನಿಪುಡಿ
ಎಲ್ಲಾ ಮುಗಿದದ್ದು ಹಳೆಯ ಮಾತಾಯ್ತು ಬಿಡು.
ಇದನ್ನೆಲ್ಲಾ ಸುಮ್ನೆ ಹೇಳಿದೆ ಆಯೀ
ಮತ್ತೆ ಅದನ್ನೇ ಕನವರಿಸುತ್ತ ಕೂಡ್ರಬೇಡ.


ಆಯೀ,
ಎಷ್ಟೊಂದು ದಿನವಾಗಿತ್ತು 
ಟೆರೇಸಿನ ಮೇಲೆ ಹೆಜ್ಜೆ ಊರದೇ.
ಗಿಡಗಳಿಗೆ ನೀರುಣಿಸುವದೂ
ಈಗೀಗ ನಿಂಗಿಯ ಕೆಲಸವೇ.
ಅಕಸ್ಮಾತ್ ಮೆಣಸಿನ ಕಾಯಿ 
ಒಣಗಿಸಲು ಟೆರೇಸ್ ಮೇಲೆ ಹೋದ ನನಗೆ 
ಅದೆಂಥ ವಿಸ್ಮಯ ಕಾದಿತ್ತು ಗೊತ್ತಾ? 

ನಾ ಬರುವ ದಿನ ಬೇಡ ಬೇಡ 
ಎಂದರೂ ಕೇಳದೇ ಚೀಲದ ಸಂದಿಯಲ್ಲಿ 
ತುರುಕಿದ್ದೆಯಲ್ಲ ಆ ಬಿಳೆ, ಕೆಂಪು, ಹಳದಿ 
ಸೇವಂತಿಗೆ ಸಸಿಗಳನ್ನ.
ಆ ಪುಟ್ಟ ಪುಟ್ಟ ಗಿಡಗಳೆಲ್ಲ ಬೆಳೆದು 
ಇಂದು ತನ್ನೊಡಲ ತುಂಬಿ 
ಹೇಗೆ ಅರಳಿ ನಿಂತಿವೆ ಗೊತ್ತಾ, ಆಯೀ.

Monday, March 8, 2010

ದೂರ ...................................ವಾಣಿ

ಹಲೋ ....................,
ರೀ, ನಾನ್ರೀ........,
......................
ಮಗೂಗೆ  ಹುಶಾರಿಲ್ಲ
..........................
ರಜವೆಲ್ಲಾ  ಮುಗಿದ್ಹೋಗಿದೆ.
................................
ನೀವು ಹಿಂದಿನ ತಿಂಗಳವೇ
ಬರ್ತೀನೆಂದವರು  ಬರಲೇ ಇಲ್ಲಾ
.................................
ಮನೆ ಬಾಡಿಗೆ  ಇನ್ನೂ  ಕಟ್ಟಿಯಾಗಿಲ್ಲಾ
......................................
ಮಾವನವರಿನ್ನೂ  ಆಸ್ಪತ್ರೆಯಲ್ಲೇ  ಇದ್ದಾರೆ.
...................................
ಏನು  ಕೇಳಿಸ್ತಾ ಇದೆಯಾ?
................................
ಅತ್ತೆಯವರ ಔಷಧ  ಮುಗಿದು ಹೋಗಿದೆ.
................................
ಜಲಜಳ ಸೀಮಂತ  ಈ ವಾರವೇ.
...................................
ಅರವಿಂದನ ಫ್ಹೀಸ್ ಕಟ್ಟೋದಿದೆ.
ಇನ್ನೂ ಲೋನೂ ಸಿಕ್ಕಿಲ್ಲಾ.
.................................
ನನಗೂ ಇತ್ತೀಚೆಗೆ
ತುಂಬಾ ತಲೆ ಸುತ್ತುತ್ತಾ ಇದೆ.
ಹಲೋ,  ಕೇಳಿಸ್ತಾ ಇಲ್ವೆ?

ಕೇಳಿಸ್ತಾ ಇದೆ,
ಕ್ರಿಕೆಟ್ ಮ್ಯಾಚ್ ನೋಡ್ತಾ ಇದ್ದೆ.
ನಿನ್ನ ಮಾತು ಮುಗೀತಾ?
ಫೋನ್  ಇಡ್ತೀನಿ.