Thursday, March 15, 2012

ಮಾತು, ಮಾತು, ಮಾತು.....


ಒಂದೊಂದು ಸಲ   ಸಲ ನಾನೊಬ್ಬಳೇ ಮಾತಾಡುತ್ತಿದ್ದೆ.  ಆಗ ನನ್ನ  ಮಾತುಗಳನ್ನು ಅವನು ತನ್ನ ಕಣ್ಣುಗಳಲ್ಲಿ ತುಂಬಿ ಕೊಳ್ಳುತ್ತಿದ್ದ.  ಇನ್ನು ಬಹಳಷ್ಟು ಸಲ  ಅವನು  ಯಾವುದ್ಯಾವುದೋ  ವಿಷಯದ ಮೇಲೆ ಬಹಳ ಗಂಭೀರವಾಗಿ  ಮಾತನಾಡುತ್ತಿದ್ದ. ಅದರಲ್ಲಿ ಬಹಳಷ್ಟು ವಿಷಯಗಳು  ನನ್ನ ತಲೆಯ ಮೇಲಿಂದಲೇ  ಹಾದು  ಹೋಗುತ್ತಿದ್ದವು.  ಆಗ ನಾನು ಅವನ ಮುಖವನ್ನಷ್ಟೇ   ನೋಡುತ್ತ  ಕುಳಿತು ಬಿಡುತ್ತಿದ್ದೆ. ಅದು ಬಹುಶಃ ಅವನಿಗೂ ಗೊತ್ತಾಗುತ್ತಿತ್ತೋ  ಏನೋ......    ಬಹಳ  ಸಲ  ಅವನ ಪಾಂಡಿತ್ಯ ನನ್ನಲ್ಲಿ ಬೆರಗನ್ನು ಹುಟ್ಟಿಸುತ್ತಿದ್ದವು. ಇನ್ನೂ  ಬಹಳ  ಸಲ ಅವನ ಮಾತುಗಳು ನನಗೆ ಬಿಡಿಸಲಾರದ ಪ್ರಶ್ನೆಯಾಗಿ ಬಿಡುತ್ತಿದ್ದವು. ಕೆಲವೊಂದು   ಸಲವಂತೂ   ಅವನ ಮಾತುಗಳು ನನ್ನ ಕರ್ಣ ಪಟಲವನ್ನು ದಾಟಿ, ಅವು   ಭಾವ ತಂತುಗಳ ವರೆಗೂ ಮುಟ್ಟಿ ಅಲ್ಲಿ ಸೂಕ್ಷ್ಮ ತರಂಗ ಗಳನ್ನೇ   ಉಂಟುಮಾಡುತ್ತಿದ್ದವು. ಹೀಗೆ ಅವನ ಮಾತಿಗೆ ಒಮ್ಮೆ  ಆಶ್ಚರ್ಯ ಪಡುತ್ತ,   ಬೆರಗಾಗುತ್ತ,  ಮತ್ತೊಮ್ಮೆಅವನ ಮಾತು ನನಗೆ    ಪ್ರಶ್ನೆಯಾಗುತ್ತ  ಮಗದೊಮ್ಮೆ ಉತ್ತರವಾಗುತ್ತ  ಎಷ್ಟೋ ಸಲ   ಅವನ ಮಾತಿಗೆ ನಾನೇ  ಭಾವವಾಗುತ್ತಾ   ನನ್ನ ಮುಗ್ಧ  ಪ್ರಪಂಚ ವಿಸ್ತಾರ ವಾಗಿಬೆಳೆದಿತ್ತು. ಅಭ್ಭಾ ಆಗಲೇ ಅದೆಂಥಾ ಅದ್ಭುತ ಜಗತ್ತನ್ನು ಅವನು ತನ್ನ ಸುತ್ತ ನಿರ್ಮಿಸಿಕೊಂಡಿದ್ದ .ದಿನಗಳು ಋತುಗಳು ಕಳೆದಂತೆ ಅವನ ವೈಚಾರಿಕ ಪ್ರಖರತೆ     ಇನ್ನೂ ಇನ್ನೂ ಬೆಳಗುತ್ತಾ  ಇತ್ತು   ಅಂತಲೇ  ನನ್ನ ಭಾವನೆ......................

ಪಠಯ್     ಪಾಠಗಳಿಂದ  ಹೊರ ಇಣುಕಿ ಸುತ್ತ  ದೃಷ್ಟಿ ಹಾಯಿಸಿದಾಗ    ಗೋಚರಿಸಿದ್ದು  ' ಚಂದ ಮಾಮಾ' .  ಆಗ  ಅದೇ ಒಂದು ದೊಡ್ಡ ಜಗತ್ತು. ಅಲ್ಲಿಯೇ  ಅದೆಷ್ಟೋ ವಸಂತಗಳು. ಅಲ್ಲಿಂದ ಮುಂದು  ಹೋಗಲಿಕ್ಕೇ   ಗೊತ್ತಾಗದ ಆ ಕಾಲ. ಅಲ್ಲಿಂದ ಮುಂದೆ  ಸರಿದದ್ದು  ಯಾವಾಗ?   ಕ್ಲಾಸಲ್ಲಿ ಪಾಠ ನಡೆಯುತ್ತಿದ್ದ ಸಮಯ, ಸ್ನೇಹಿತೆಯ ಪಟ್ಯ ಪುಸ್ತಕದಿಂದ ಜಾರಿಬಿದ್ದ  ಪ್ರೇಮಭರಿತ  ಕಾದಂಬರಿ. ಆಮೇಲೆ ಅದೆಷ್ಟೋ ವರ್ಷಗಳವರೆಗೂ  ಮನಸ್ಸನ್ನ  ಕಟ್ಟಿ ಹಾಕುವ  ಅದೇ ದಾರಿಯ  ಪಯಣ.  ನಾಯಕ ಧರಿಸಿದ  ತುಂಬು ತೋಳಿನ ಶರ್ಟು.  ನಾಯಕಿಗೊಪ್ಪುವ  ತಿಳಿ  ಬಣ್ಣದ ರೇಷ್ಮೆ ಸೀರೆ ,ಅವಳು ಮುಡಿದ ಕನಕಾಂಬರ, ಮಲ್ಲಿಗೆ ಮಾಲೆ.  ಪ್ರೀತಿ ಪ್ರಣಯ  ಇಂಥಹ  ಸಾಹಿತ್ಯದ್ದೇ ದರ್ಬಾರು. ಸಾಹಿತ್ಯ ವೆಂದರೆ  ಇವಿಷ್ಟೇ ಎಂಬ ತಿಳುವಳಿಕೆ. ಆ ಕಾಲಘಟ್ಟದಲ್ಲೇ  ಅವನ ಮಾತುಗಳು ನನ್ನ ಸೆಳೆದದ್ದು. ಆಗ ಅಲ್ಲಿ  ಅವನ ಮಾತಿಗೆ ಸೆಳೆತ ಮಾತ್ರ ವಿರಲ್ಲಿಲ್ಲ . ಅಲ್ಲಿ ಎಷ್ಟು ಗೊಂದಲವಿತ್ತು  ಅಂದರೆ,  ಮೊದಮೊದಲು  ಅವನ ಮಾತುಗಳು  ಅರ್ಥವೇ ಆಗುತ್ತಿರಲಿಲ್ಲ. ಇದು ಬದುಕ? ಇದು ಸಾಹಿತ್ಯವಾ? ಸಾಹಿತ್ಯ ಬದುಕು ಒಂದೇನಾ? ಅಥವಾ ಬೇರೆ ಬೇರೆನಾ? ಸಾಹಿತ್ಯದೊಳಗೆ ಬದುಕಾ?  ಬದುಕಿನೊಳಗೆ ಸಾಹಿತ್ಯವಾ? ಏನೇನೆಲ್ಲಾ ಪ್ರಶ್ನೆಗಳನ್ನು  ಮನದಲ್ಲಿ  ತುಂಬಿಕೊಂಡು  ಅವನ ಮುಖವನ್ನೇ ದಿಟ್ಟಿಸುತ್ತಿದ್ದೆ. ಆಗ  ಅವನ ಮಾತುಗಳು  ಎಷ್ಟು  ಅರ್ಥ ವಾಗುತ್ತಿತ್ತೋ ಬಿಡುತ್ತಿತ್ತೋ  ಆದರೆ ಈ ವಿಸ್ತಾರವಾದ ಹೊಸಪ್ರಪಂಚಕ್ಕೆ ಧುಮುಕುವ ಅದಮ್ಯ ಆಸೆ .   ದಿನಕ್ಕೊಂದು ವಿಚಾರ, ದಿನಕ್ಕೊಂದು ವಿಶ್ಲೇಷಣೆ. ಜೀವನದ ಎಲ್ಲಾ ಮಗ್ಗಲುಗಳನ್ನೂ ತಡಕಿ ತಡಕಿ ಬಗೆದು ಬಗೆದು ಅದರ ಆಳ ಅಗಲಗಳನ್ನು  ಒರೆಗೆ ಹಚ್ಚುವ ಅವನ ಮಾತುಗಳು  ಅಂದರೆ  ಏನೋ ಹೊಸತನ್ನು ಪಡೆದ ಸಂಭ್ರಮ. ಆ ಮಾತು ಕಥೆಗಳ ನಡುವೆಯೇ   ನುಸುಳುವ  ಒಂದೊಂದು ಮುಗ್ಧ  ಪ್ರಶ್ನೆ . ಅಂಥ  ಬಾಲಿಶ ಮಾತುಗಳು ಅವನಿಗೆ ನಗು ತರಿಸುತ್ತಿತ್ತಾ?    ಈಗಲೂ  ನೆನಪಿದೆ. ಒಂದುದಿನ  ಅವನು ಓಶೋನ   ದೃಷ್ಟಿಯಲ್ಲಿ ಆಸೆ, ಬದುಕು ಅದರ ಬಗ್ಗೆ  ಬಹಳ  ಆಳವಾಗಿ ಮಾತನಾಡುತ್ತಿದ್ದ.   ಅದು ನನಗೆ  ಕಬ್ಬಿಣದ ಕಡಲೆ ಅಂತ  ಅನಿಸಿರಬೇಕು.  ಥಟ್ಟನೆ ಹೇಳಿದೆ  ಈ ವಿಷಯದಲ್ಲಿ  ಬುಧ್ಧನ ವಿಚಾರಗಳೇ ಹೆಚ್ಚು ಪ್ರಿಯ. ಬುಧ್ಧ  ಎಷ್ಟು ಸರಳವಾಗಿ ಹೇಳಿದ್ದಾನೆ ಆಸೆಯೇ ದುಃಖಕ್ಕೆ ಕಾರಣ  ಎಂದು. ಬುಧ್ಧನ ವಿಚಾರದಲ್ಲಿ ಬದುಕನ್ನ ಫಾಲೋ ಮಾಡಿದರೆ  ಬದುಕು ಎಷ್ಟು ಸುಂದರ ಅಲ್ವೇ.....  ಆಗ ಥಟ್ಟನೆ ಅವನ  ಉತ್ತರ ಬಂತು. ಆಸೆ, ಬದುಕು ಎನ್ನುವದೆಲ್ಲ  ಬುಧ್ಧ ಹೇಳಿದಷ್ಟು ಸರಳವಾಗಿದ್ದಿದ್ದರೆ ........ ..............

ಕಾಲ ಸರಿದು ಬೆಳಗು ಹಗಲಾಗುವ  ಸಮಯ.  ಮುಗ್ಧ ಭಾವಕ್ಕೆ ಪ್ರೌಢತೆಯ ಮೆರಗು.  ಬದುಕಿಗೆ ತನ್ನದೇ ಒಂದು ಪರಿಧಿಯನ್ನು  ಕಟ್ಟಿಕೊಳ್ಳುವ  ಸಂದರ್ಭ  ಮತ್ತು  ಸಂಭ್ರಮ .

ಅವನು ಹರವಿಟ್ಟ ಮಾತುಗಳು   ಪುಟ್ಟ ಬೊಗಸೆಗಳಲ್ಲಿ  ಎಷ್ಟು ಸೋರಿ ಹೊಗಿತ್ತೋ  ಎಷ್ಟು ಉಳಿದುಕೊಂಡಿತ್ತೋ ....... ಉಳಿದುಕೊಂಡ ಮಾತುಗಳೆಲ್ಲಾ  ಮುತ್ತುಗಳೇ  ಎಂಬ   ಭಾವ.

 ಕೆಲವೊಮ್ಮೆ  ಬದುಕಿನ  ತಿರುವಿನಲ್ಲೆಲ್ಲೋ   ಚಲಿಸುವ  ಹೆಜ್ಜೆ ಒಂದು ಕ್ಷಣ ನಿಂತು ಬಿಟ್ಟಿದೆಯೇನೋ   ಎಂದು ಗಾಬರಿಯಾದಾಗ    ಅವನಾಡಿದ   ಮಾತುಗಳ  ಮಿಂಚು.

ಮದ್ಯಾಹ್ನದ ಬಿಸಿಲಿಗೆ ಪ್ರಖರತೆ ಹೆಚ್ಚು. ಆ ಪ್ರಕಾಶಕ್ಕೆ ಎಷ್ಟೊಂದು  ಹೊಳಪು.  ಆದರೆ ಬಿಸಿ ಇಳಿದು  ಸಂಜೆಯ ತಂಪು ಆವರಿಸುತ್ತಿದ್ದಂತೆ  ಅಲ್ಲಿ  ಪ್ರಕಾಶವೂ ಕಡಿಮೆ. ಹೊಳಪೂ  ಕಡಿಮೆ.

ಇಂಥದ್ದೇ  ಒಂದು ಥಣ್ಣನೆಯ ಸಂಜೆಯಲಿ ಮತ್ತೆ  ಅದೇ   ಅವನೆದುರಿಗೇ  ಕುಳಿತು  ಅವನ ಮಾತುಗಳನ್ನ  ಕೇಳಿಸಿ ಕೊಳ್ಳುವ   ಆಕಸ್ಮಿಕ   ಸಂದರ್ಭ.   ಅಲ್ಲಿ ಅವನಿಂದ  ಅದೇ.........   ಮಾತುಗಳು  ......     ಭೂತ  ಭವಿಷ್ಯಗಳನ್ನು ವೈಚಾರಿಕ   ದ್ರವದೊಳಗೆ  ಅದ್ದಿ  ಅದ್ದಿ  ಮುಳುಗಿಸಿ    ಅದನ್ನು ಜೋಪಾನವಾಗಿ  ಎತ್ತಿಡುವ  ಅವನ  ಮಾತುಗಳು.   ಸಮಯದ  ಪರಿವೇ  ಇಲ್ಲದ  ಅವನ  ಮಾತುಗಳು.    ಆದರೆ  ಈ ಸಲ  ಯಾಕೋ  ಅವನ  ಮಾತುಗಳ ಬಗ್ಗೆ  ಬೆರಗಾಗಲಿ    ಆಶ್ಚರ್ಯವಾಗಲಿ  ಪ್ರಶ್ನೆಗಳಾಗಲಿ   ನನ್ನಲ್ಲಿ   ಹುಟ್ಟಲೇ  ಇಲ್ಲಾ.  ಯಾಕೋ    ನನ್ನೊಳಗೆಲ್ಲ   ಬರೇ ಮೌನವೇ.   ಅವನಿಗೇ   ಬೆರಗಾಗಿರಬೇಕು   ಕೇಳಿದ .  ಎಲ್ಲಿ ನಿನ್ನ ಮಾತುಗಳೆಲ್ಲಾ   ಎಲ್ಲಿ ಹೋದವು ?.............. ....ಅವನ ಪ್ರಶ್ನೆಗೂ  ಉತ್ತರಿಸಬೇಕು  ಅಂತ  ಅನ್ನಿಸಲಿಲ್ಲ  .  ಆದರೆ  ಮನಸ್ಸು  ತನ್ನಷ್ಟಕ್ಕೇ  ಕೇಳಿಕೊಂಡಿತು.  ಬದುಕಿಗೆಷ್ಟು ಮಾತು  ಬೇಕು ?   "ಭೂತವಂತೂ ಕಣ್ಮುಚ್ಚಿ ಮಲಗಿರುತ್ತದೆ. .   ಭವಿಷ್ಯ ಕಣ್ ತೆರೆದೇ  ಇರುವದಿಲ್ಲ ., ಇನ್ನು ವರ್ತಮಾನಕ್ಕೆಷ್ಟು   ಮಾತುಗಳು????

23 comments:

Swarna said...

"ಬದುಕಿಗೆಷ್ಟು ಮಾತು ಬೇಕು ? "ಭೂತವಂತೂ ಕಣ್ಮುಚ್ಚಿ ಮಲಗಿರುತ್ತದೆ. . ಭವಿಷ್ಯ ಕಣ್ ತೆರೆದೇ ಇರುವದಿಲ್ಲ ., ಇನ್ನು ವರ್ತಮಾನಕ್ಕೆಷ್ಟು ಮಾತುಗಳು????"
ನಿಜ ಮೇಡಂ. ಸುಂದರವಾಗಿ ಹೇಳಿದ್ದಿರಿ.
ಆ ಮೌನ ಎಲ್ಲರಿಗೂ ಸಿಧ್ಧಿಸಲಿ
ಸ್ವರ್ಣಾ

ಚುಕ್ಕಿಚಿತ್ತಾರ said...

chanda baradde umakka..

ಓ ಮನಸೇ, ನೀನೇಕೆ ಹೀಗೆ...? said...

ಅಬ್ಭಾ!!..ಎಷ್ಟು ಚಂದದ ಬರಹ ಉಮಕ್ಕಾ...ಎರಡು ಸಲ ಓದಿದೆ..ತುಂಬಾ ಇಷ್ಟವಾಯ್ತು.

sunaath said...

ಉಮಾ ಮೇಡಮ್,
ಬದುಕನ್ನು ಅರ್ಥೈಸಿಕೊಳ್ಳಬೇಕಾದ ಬಗೆಯನ್ನು ತುಂಬ ಸುಂದರವಾಗಿ ಬಿಡಿಸಿಟ್ಟಿದ್ದೀರಿ.

ಈಶ್ವರ said...

ಭೂತದ ಮೇಲೆ ವರ್ತಮಾನದ ಮಾತುಗಳು ಉಳಿಯುತ್ತದೆ.. ಆದರೆ ಮೌನಕ್ಕೆಂತಹ ಬೆಲೆ !! ಲೇಖನ ಚೆನ್ನಾಗಿದೆ ಉಮಕ್ಕಾ..

Uma Bhat said...

ಹೌದು ಸ್ವರ್ಣಾ ಅವರೇ ಮಾತು ಬೆಳ್ಳಿ ಮೌನ ಬಂಗಾರ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

Uma Bhat said...

ವಿಜಯ ಶ್ರೀ ನಿನ್ನ ಅಕ್ಕರೆಯ ಮೆಚ್ಚುಗೆಗೆ ಧನ್ಯವಾದಗಳು.

Uma Bhat said...

ಹೇ ಚೇತನಾ ನಿನ್ನ ಪ್ರೀತಿಗೆ ತುಂಬಾ ತುಂಬಾ ಖುಷಿ ಆತು.

Uma Bhat said...

ಸುನಾಥ್ ಕಾಕಾ,ನಿಮ್ಮ ಮೆಚ್ಚುಗೆಯೇ ನಮ್ಮ ಸಂತೋಷ. ನಿಮಗೆ ಧನ್ಯವಾದಗಳು.

Uma Bhat said...

ಈಶ್ವರ ಭಟ್ ಅವರೇ ನಿಮ್ಮ ಪ್ರತಿಕ್ರಿಯಿಗೆ ಧನ್ಯವಾದಗಳು.

ಸುಧೇಶ್ ಶೆಟ್ಟಿ said...

ishta aaytu :)sundara shaili nimmadu :)

Soumya. Bhagwat said...

nice one mam.. :) ಬದುಕಿಗೆಷ್ಟು ಮಾತು ಬೇಕು ? "ಭೂತವಂತೂ ಕಣ್ಮುಚ್ಚಿ ಮಲಗಿರುತ್ತದೆ. . ಭವಿಷ್ಯ ಕಣ್ ತೆರೆದೇ ಇರುವದಿಲ್ಲ ., ಇನ್ನು ವರ್ತಮಾನಕ್ಕೆಷ್ಟು ಮಾತುಗಳು???? loved this line a lot :)

Dr.D.T.Krishna Murthy. said...

ಕೆಲವೊಮ್ಮೆ ಮಾತಿಗಿಂತ ಮೌನವೇ ಹೆಚ್ಚು ಅರ್ಥಪೂರ್ಣ ಎನಿಸುತ್ತದೆ.ಉಮಾ ಮೇಡಂ;ಚೆಂದದ ಬರಹ.

Uma Bhat said...

ಸುಧೇಶ್, ಸೌಮ್ಯಾ, ಹಾಗೂ D.T.K.ಯವರೇ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

ಶಿವರಾಮ ಭಟ್ said...

ಅತ್ತೆ,
ವಾವ್! ರಾಶಿ ಚಲೋ ಆಯ್ದು...
ಅವನು ಇಷ್ಟೆಲ್ಲಾ ಮಾತಾಡ್ತಿದ್ದನ?:-)
ಶಿವಣ್ಣ

Uma Bhat said...

ಹೌದು ಮಾರಾಯಾ ಅವನು ಅಷ್ಟೊಂದು ಮಾತಾಡ್ತಿದ್ದ ....

ಸುಷ್ಮಾ ಮೂಡುಬಿದಿರೆ said...

ನಿಮ್ಮ ಬ್ಲಾಗ್ ಗೆ ಮೊದಲ ಭೇಟಿ...
ವಾವ್ಹ್.... ಬಹಳ ಸುಂದರವಿವೆ...ಪ್ರತಿ ಸಾಲುಗಳೂ ಇಷ್ಟವಾದುವು....

Anonymous said...

"ಆಗ ನನ್ನ ಮಾತುಗಳನ್ನು ಅವನು ತನ್ನ ಕಣ್ಣುಗಳಲ್ಲಿ ತುಂಬಿ ಕೊಳ್ಳುತ್ತಿದ್ದ." ----> what a beautiful typo! actually, it should've been "...ತುಂಬಿಕೊಳ್ಳುತ್ತಿದ್ದ." but splitting the word into two parts imparts a much deeper meaning. "ಕೊಳ್ಳು" as a verb, means 'to buy.' and to buy something, one has to pay a price (ಬೆಲೆತೆರು), coz as people say, nothing in the world comes for free other than 'advice' (and if one happens to be a female, then ನಮ್ಮ ನಿತ್ಯಾನಂದ ಚಾ(ಕಾ)ಮಿಗಳು ಅತ್ಯಾನಂದದಿಂದ ಮುಫತ್ತಾಗಿ ಬರುವರು. well, it need not necessarily be a female belonging to the homo sapiens species). ಇರಲಿ, ಅರ್ಥಾತ್, ಆತ ನಿಮ್ಮ ಮಾತುಗಳಿಗೆ 'ಬೆಲೆಕೊಡುತ್ತಿದ್ದ' which again means 'to respect.' though it sounds funny initially, it can literally mean that he used to respect your words. ಹಾಗೂ "ಕಣ್ಣುಗಳಲ್ಲಿ" ಎನ್ನುವುದು ಮತ್ತಷ್ಟು ಅರ್ಥಪೂರ್ಣ, the icing on the cake. ಏಕೆಂದರೆ "ಕಿವಿಗಳಲ್ಲಿ ತುಂಬಿಕೊಳ್ಳುತ್ತಿದ್ದ" ಎಂದೇನಾದರೂ ಆಗಿದ್ದರೆ, ಅದರ ಅರ್ಥ ನೀವಾಡಿದ ಮಾತುಗಳು ಅವನ ಮೆದುಳಿಗೆ ತಲುಪದೆ ಕಿವಿಗಳಲ್ಲೇ ತುಂಬಿಕೊಂಡು ತುಕ್ಕು ಹಿಡಿಯುತ್ತಿವೆ ಎಂದಾಗುತ್ತದೆ. means he is not paying any heed to what you're talking about, which a woman can interpret in multimillion dimensions and make his life miserable than that of a dog's. ಅಂತಹ ಸಂಧರ್ಭದಲ್ಲಿ ಬಹುಶಃ 'ಮೈಯೆಲ್ಲಾ ಕಿವಿಯಾಗಿ ಕೇಳುತ್ತಿದ್ದ' ಎನ್ನಬೇಕಾಗುತ್ತಿತ್ತೇನೋ!? ಅದಕ್ಕೇ ಹೆಣ್ಣುಮಕ್ಕಳು ಹೇಳೋದ್ನ ಕಣ್ಣಲ್ಲೇ ಕೇಳಿಸ್ಕೊಳೋದು ಬೆಟರ್ರು ಅಲ್ವಾ.

but your line invariably reminds me of the following lines:

"Keep word, Lysander: we must starve our sight
From lovers' food till morrow deep midnight."

...how "starve our sight from lovers' food" and "ಮಾತುಗಳನ್ನು ಕಣ್ಣುಗಳಲ್ಲಿ ತುಂಬಿಕೊಳ್ಳುವುದು" complement each another! aren't they!?

and if your hero exists for real, then pls convey my regards to him. for the word 'Osho' is sufficient enough for him to deserve some respect.

thanks,
-R

prashasti said...

ಚೆಂದಿದ್ದು ಉಮಕ್ಕ :-)

Anonymous said...

ಆ ಕೊನೆಯ ಸಾಲುಗಳು ಯಾಕೋ ಮನಸ್ಸಿನಾಳಕ್ಕೆ ಇಳಿದವು ಚೆನ್ನಾಗಿದೆ ಮೇಡಂ...
http://nenapinasanchi.wordpress.com

Ganapati G Hegde said...

ESHT MATADYTE MARAYTI?

ಸೀತಾರಾಮ. ಕೆ. / SITARAM.K said...

tumba chendada kahe

Shreepad Hegde Salkod said...

ತುಂಬಾ ಅರ್ಥಪೂರ್ಣ ಬರೆಹ. ಬರೆಯುತ್ತಾ ಇರು.