Thursday, February 11, 2010

ಮಾತು

ತುಟಿ ಬಿರಿದ ಮಾತುಗಳು
ತುಟಿಯೊಳಗಿನ ಮಾತಾಗುವದಿಲ್ಲ.

ತುಟಿ ಬಿರಿದ ಮಾತುಗಳು
ಕೊರೆದಿಟ್ಟ ಚಿತ್ರದಂತೆ,
ಕಾಣುವ ಕಣ್ಣಿಗೆ
ಸಾವಿರ ಅರ್ಥಗಳು.

ತುಟಿಯೊಳಗಿನ ಮಾತುಗಳು
ಮುಚ್ಚಿಟ್ಟ ಬಾಟಲಿನ ಅತ್ತರದಂತೆ,
ಅದು ಘಮಘಮಿಸುವದಿಲ್ಲ,
ಕಾಲನ ಜೊತೆ ಆವಿಯಾಗಿ ಬಿಡುತ್ತದೆ.

ತುಟಿ ಬಿರಿದ ಮಾತುಗಳು
ಅರಳಿ ನಿಂತ ಮಲ್ಲಿಗೆಯಂತೆ
ನಳನಳಿಸುತ್ತವೆ, ಮತ್ತು
ಬಸವಳಿದು ಬಾಡುತ್ತವೆ.

ತುಟಿಯೊಳಗಿನ ಮಾತುಗಳು
ಚಿಪ್ಪಿನೊಳಗಿನ ಹನಿಯಂತೆ,
ಮುತ್ತೂ ಆಗುತ್ತವೆ,
ಶೂನ್ಯವೂ ಆಗುತ್ತವೆ.

ತುಟಿ ಬಿರಿದ ಮಾತುಗಳು
ರೆಕ್ಕೆ ಬಲಿತ ಹಕ್ಕಿಯಂತೆ,
ಮೇಲಕ್ಕೂ ಹಾರುತ್ತವೆ,
ಕೆಳಕ್ಕೂ ಜಾರುತ್ತವೆ.

ತುಟಿಯೊಳಗಿನ ಮಾತುಗಳು
ಹೆಪ್ಪುಗಟ್ಟಿದ ಹಿಮದಂತೆ,
ತಂಪಾಗಿರುತ್ತವೆ,
ತಣ್ಣಗೆ ಕೊರೆಯುತ್ತವೆ.

ತುಟಿ ಬಿರಿದ ಮಾತುಗಳೆಂದೂ
ತುಟಿಯೊಳಗಿನ ಮಾತಾಗುವದಿಲ್ಲ.

Friday, February 5, 2010

ಪುಟ್ಟಿಯ ಜಗತ್ತು - ೧

ನಮ್ಮ ಮನೆಯ ಜಗುಲಿ ತುಂಬಾ ವಿಶಾಲವಾಗಿದೆ. ಇಡೀ ಕೇರಿಯಲ್ಲೇ  ಇಂಥಾ ಹನ್ನೆರಡಂಕಣದ  ಜಗುಲಿ ಮತ್ಯಾರ ಮನೆಯಲ್ಲೂ ಇಲ್ಲ.  ತಾನು  ಬೆವರು ಸುರಿಸಿ ಇಷ್ಟು ದೊಡ್ಡ ಮನೆಯನ್ನು ಕಟ್ಟಿಸಿದ್ದೇನೆ ಎಂಬ ಹೆಮ್ಮೆ ನನ್ನ ಅಜ್ಜನಿಗೆ.  ಗೆಳತಿಯರನ್ನೆಲ್ಲಾ ಸೇರಿಸಿಕೊಂಡು ಜಗುಲಿಯ ಮೇಲೆ ಆಡಲು ನನಗಂತೂ  ಬಹಳ ಖುಶಿ. ಒಂದೇ ಒಂದು ಬೇಸರವೆಂದರೆ ಈ ಜಗುಲಿಯಲ್ಲಿ ದಿನದ ಮೂರೂ ಹೊತ್ತು ಕೇರಿಯ  ಗಂಡಸರ ಸಭೆ ಸೇರಿರುತ್ತದೆ.  ಅವರ ಸಭೆ ಸೇರಿಲ್ಲದ ಹೊತ್ತು ಮಾತ್ರ ಇದು ನಮ್ಮ  ರಾಜ್ಯ.  ನಮ್ಮಮ್ಮನಿಗೆ ಯಾಕೊ  ಈ ದೊಡ್ಡ ಮನೆ, ದೊಡ್ಡ ಜಗುಲಿ ಎಂದರೆ ಒಂದು ಥರದ  ಅಲರ್ಜಿ.  ಈ ಮನೆಯಲ್ಲಿ ಕಸ ಹರಡಲು  ಐವತ್ತು  ಕೈ,  ಕಸ ಬಳಿಯಲು ಮಾತ್ರ ಎರಡೇ ಕೈ ಅಂತಲೋ, ಈ ಸಭಾ ಸದಸ್ಯರಿಗೆ ಮೂರೂ ಹೊತ್ತು ಚಾ, ಕಷಾಯ ಅಂತ ಹೆಣಗಾಡಲು  ಮೂರು ಇದ್ದವರೇ ಆಗಬೇಕು ಅಂತಲೋ  ಹೇಳುತ್ತಾ   ಇರುತ್ತಾರೆ.  ನನ್ನಕ್ಕನಿಗೂ  ಈ ಜಗುಲಿಯೆಂದರೆ ತುಂಬಾ ಇಷ್ಟ. ಯಾಕೆಂದರೆ ನಮ್ಮ ಕೇರಿಯಲ್ಲಿ ಸಂಗೀತ, ಸಾಹಿತ್ಯದ
ದೊಡ್ಡ ದೊಡ್ಡ ಕಾರ್ಯಕ್ರಮಗಳಾದರೆ  ಮಾತ್ರ, ದೇವಸ್ಥಾನದ ಮಾಳಿಗೆಯ ಮೇಲೆ ಮಾಡುತ್ತಾರೆ. ಸಣ್ಣ ಪುಟ್ಟ ಕಾರ್ಯಕ್ರಮಗಳನ್ನ ನಮ್ಮ ಮನೆ ಜಗುಲಿಯ ಮೇಲೇ ಮಾಡುತ್ತಾರೆ. ಒಮ್ಮೆ ಕಾರಂತಜ್ಜನ  ಪ್ರಶ್ನೋತ್ತರ  ಕಾರ್ಯಕ್ರಮವೂ   ಇಲ್ಲೆ ನಡೆದಿತ್ತು.  ಹೀಗಾಗಿ  ಸಂಗೀತ ಸಾಹಿತ್ಯದ ಪ್ರಿಯೆಯಾದ ನನ್ನಕ್ಕನಿಗೆ  ನಮ್ಮ ಮನೆಯ ಜಗುಲಿಯೆಂದರೆ ಅಷ್ಟೊಂದು ಇಷ್ಟವಾದದ್ದು.

ಇವತ್ತು ಬೇಬಿ ಮನೆಗೆ  ಬಂದ, ಅವಳ ಅತ್ತೆಯ ಮಕ್ಕಳಲ್ಲಾ ಸೇರಿ, ಜಗುಲಿಯ ಮೇಲೆ,  ಎಷ್ಟು ಚೆನ್ನಾಗಿ ಆಟ ಆಡ ಬಹುದಿತ್ತು. ಆದರೆ ಅಮ್ಮ  ವಹಿಸಿದ  ಕೆಲಸದಿಂದ, ನನಗೆ  ಸರಿಯಾಗಿ ಆಟವನ್ನೇ  ಆಡಲಿಕ್ಕೆ ಆಗ್ತಾ  ಇಲ್ಲಾ.  ಅಮ್ಮ ನನಗೆ ಮೇಲಿಂದ ಮೇಲೆ ಎಚ್ಚರಿಸ್ತಾನೆ ಇರ್ತಾಳೆ.  ಅಕ್ಕನ ಮೇಲೆ  ಕಣ್ಣಿಟ್ಟಿರು, ಅವಳನ್ನು ಬಹಳ ಹೊತ್ತು ಒಬ್ಬಳೇ ಇರಲಿಕ್ಕೆ ಬಿಡಬೇಡ ಎಂದು.  ಒಮ್ಮೊಮ್ಮೆ  ನನಗೆ ಅಕ್ಕನ ಮೇಲೆ  ಕೋಪಾನೆ ಬರುತ್ತದೆ.   ಈ ಕೇರಿಯಲ್ಲೇ ಎಷ್ಟೋ  ಅಕ್ಕಂದಿರ  ಮದುವೆ ಆಗಿದೆ. ಮೊನ್ನೆ ಮೊನ್ನೆ ಮದುವೆಯಾದ ಜಾನಕ್ಕಾ, ಸರಸಕ್ಕಾ ಎಲ್ಲರು ಎಷ್ಟು ಖುಷಿಯಾಗಿದ್ದಾರೆ.  ಇವಳು ಮಾತ್ರ ಮದುವೆ ನಿಶ್ಚಯ ಆದಾಗಿನಿಂದ ಮಂಕಾಗಿ ಕುಳಿತು ಬಿಟ್ಟಿದ್ದಾಳೆ.   ಒಂದೊಂದು  ಸಲ ಅಜ್ಜನಮನೆ ಗಜೂಮಾಮ  ಹೇಳೋದೇ ಸರಿ  ಅನ್ಸುತ್ತೆ.  "ಅಕ್ಕೈಯ್ಯ,  ನೀನು ಶಾಲಿನಿಯ  ತಲೆಮೇಲೆ   ಏರಿಸ್ಕೊಂಡು ಕುಳಿತುಕೊಂಡುಬಿಟ್ಟಿದ್ದಿಯಾ. ಅಲ್ಲದೆ  ಅವಳಿಗೆ ಪ್ರಪಂಚದ ಜ್ಞಾನವೂ ಕಡಿಮೆ  ಇರಬೇಕು  ಬಿಡು. ಇಲ್ಲದೆ ಹೋದ್ರೆ ಅಷ್ಟು  ಚಂದದ  ಹುಡುಗ, ಇವಳು ಹೀಗಾಡ್ತಿದ್ದಾಳೆ ಅಂದ್ರೆ ಮತ್ತಿನ್ನೇನು  ಹೇಳ್ಬೇಕು?   ಬೇರೆ  ಹುಡುಗಿಯರಾಗಿದ್ರೆ, ಕನಸಿನಲ್ಲೇ  ಅರಮನೆಯನ್ನ ಕಟ್ಟಿ ಎಷ್ಟು ಖುಶಿಯಾಗಿ  ಇರುತ್ತಿದ್ದರು. ಇವಳು  ಥೇಟ್ ನಮ್ಮನೆ  ಗೌರಿಯ ಅಪಾರವತಾರ  ಅಂತಾನೇ  ಕಾಣಿಸ್ತಾ ಇದೆ" ಅಂತ.  ಹಾಗಂತ ಅಕ್ಕ ಕೆಟ್ಟವಳು ಅಲ್ಲವೇ ಅಲ್ಲಾ.  ಅವಳು  ತುಂಬಾ ಒಳ್ಳೆಯವಳೇ.  ನಾನೆಂದರೆ ಅವಳಿಗೆ ಎಷ್ಟು ಇಷ್ಟ. ಅಮ್ಮನೂ ಹಾಗೆ ಹೇಳ್ತಾಳೆ. ಪಾಪದ ಕೂಸೇ ಅವಳು.  ಆದ್ರೆ ತೀರಾ ತೀರಾ ನಾಜೂಕು. ನಿನ್ನ ಗಜೂ ಮಾವ ಹೇಳಿದ ಹಾಗೆ ಗೌರಿ ಚಿಕ್ಕಿಯ ಹಾಗೆ, ಅವಳದೂ ಒಂದು  ಭಂಡ ಬದುಕು ಆಗದೆ ಹೋದ್ರೆ ಸಾಕು ಮಹರಾಯ್ತಿ. ಹಾಗೇನಾದ್ರೂ ಆದ್ರೆ ನಿನ್ನ  ಅಮ್ಮಂಗೆ ಈ ಬದುಕೇ ಬೇಡಾ  ಅಂತ. 

ನಮ್ಮ ಮನೆಯಲ್ಲಿ ಇಬ್ಬರು ಚಿಕ್ಕಪ್ಪಂದಿರ  ಮಕ್ಕಳು, ಮತ್ತು ನಾನು, ಅಕ್ಕ ಸೇರಿ ಒಟ್ಟು ನಾಲ್ಕ.  ಹೈಸ್ಕೂಲು, ಪಾಠಶಾಲೆ,  ಅಂತ  ಓದಲಿಕ್ಕೆ ನಮ್ಮ ಮನೆಯಲ್ಲಿ ಉಳಿದುಕೊಂಡ ಮಕ್ಕಳು ನಾಲ್ಕು. ಎಲ್ಲಾ ಸೇರಿ ಮನೆಯಲ್ಲಿ ನಾವು ಒಟ್ಟು ಎಂಟು ಮಕ್ಕಳು. ಎಲ್ಲರೂ ಅವರವರ ಹೋಂ ವರ್ಕ್,  ಅಭ್ಯಾಸ ಮುಗಿಸಿ, ಮೆತ್ತು ಹತ್ತಿದರೆ ಹಾಡು, ಕಥೆ, ಚರ್ಚೆ, ಜಗಳ, ಕುಸ್ತಿ, ಆ ಲೋಕವೇ ಬೇರೆ. ಆದರೆ ಅಕ್ಕ ಅವಳ ಮದುವೆ  ಗೊತ್ತಾದಾಗಿನಿಂದ,  ಮೇಲಿನ ಮೆತ್ತಿಗೆ ಹೋಗಿ ಕುಳಿತು ಬಿಡುತ್ತಿದ್ದಳು . ಮೇಲಿನ ಮೆತ್ತಿ ಅಂದರೆ ಅಲ್ಲಿ ಗಾಳಿ ಬೆಳಕು ತುಂಬಾ ಕಡಿಮೆ. ಅದು ಮಡಿ ಬಟ್ಟೆಯನ್ನು ಒಣಗಿಸಲಿಕ್ಕೆ ಮಾತ್ರ ಉಪಯೋಗಿಸುತ್ತಾರೆ.   ನಮ್ಮ ಮನೆಯ ರಾಜತ್ತೆ ಮಾತ್ರ ಕೋಪ ಬಂದಾಗ ಅಲ್ಲಿ ಹೋಗಿ ಕುಳಿತು ಬಿಡುತ್ತಿದ್ದಳಂತೆ.   ಅದಕ್ಕೇ ಮೇಲಿನ ಮೆತ್ತಿಗೆ  'ರಾಜಿಯ ಕೋಪ ಗೃಹ' ಎಂದು, ಅಜ್ಜಿ ತಮಾಷೆ ಮಾಡುತ್ತಿದ್ದರಂತೆ.  ಇದನ್ನು ನನಗೆ ಯಾವಾಗಲೋ ರಘು ಚಿಕ್ಕಪ್ಪ ಹೇಳಿದ್ದು.  ಮೇಲಿನ ಮೆತ್ತಿಯಲ್ಲಿ  ಹಳೆ ಹಳೆ  ಚಂದಮಾಮ, ಸೋವಿಯತ್ ದೇಶ, ಕಸ್ತೂರಿ,  ಮುರುಕು ಖುರ್ಚಿ, ಹಳೆ ಪಾತ್ರೆಗಳು ತುಂಬಿಕೊಂಡು, ಅಲ್ಲಿ ಒಂದು ಥರಾ ಉಸಿರು ಕಟ್ಟಿಸುವ ವಾತಾವರಣವಿತ್ತು.  ಈಗೀಗ ಅಕ್ಕ ಯಾವುದೋ ಹಳೆ ಪುಸ್ತಕವನ್ನು ಓದುತ್ತಲೋ, ಅಥವಾ ಸುಮ್ಮನೆ ಖುರ್ಚಿಗೆ ಒರಗಿಯೋ, ಅಲ್ಲೇ  ಕುಳಿತುಕೊಂಡು ಬಿಡುತ್ತಿದ್ದಳು.  ಅಮ್ಮನಿಗೆ  ಯಾವಾಗಲೂ  ಬೆನ್ನು  ನೋವು. ಆದಕ್ಕೆ  ಅಮ್ಮ ರಾತ್ರಿ ಮಲಗಿಕೊಂಡಾಗ ಬೆನ್ನ  ಗುದ್ದಿಸಿಕೊಳ್ಳಲು ಅವಳ ಕೋಣೆಗೆ  ನನ್ನ  ಕರೆಯುತಿದ್ದಳು.  ಆಗ ಅಕ್ಕನ ಬಗ್ಗೆ ಸಣ್ಣದನಿಯಲ್ಲಿ ಅಪ್ಪನ  ಹತ್ತಿರ  ಹೇಳುತಿದ್ದಳು. ಆದಕ್ಕೆ ಅಪ್ಪ,  ಅವಳು ಸರಿಯಾಗೇ ಇದ್ದಾಳೆ. ನಿನಗೆ ಬೇರೆ ಕೆಲಸವಿಲ್ಲ  ನೋಡು, ಅಂದು ರೇಗಾಡ್ತಿದ್ರು. 'ಶ್,  ಶ್,  ಸಣ್ಣಕೆ ಮಾತಾಡಿ ಪಕ್ಕದ ಕೋಣೆವರೆಗೂ, ನಮ್ಮ ಜಗಳ ಕೆಳ್ಗು ' ಅನ್ನುತ್ತಿದ್ದಳು  ಅಮ್ಮ.  ಇವರು  'ಯಾವಾಗ  ನನ್ನ ಮಾತ  ಕೇಳಿದ್ದು  ಇದ್ದು',  ಎಂದು  ಬೇಸರ  ಮಾಡಿಕೊಳ್ಳುತ್ತಿದ್ದಳು  ಆಮ್ಮ,  ಮತ್ತು  ನನ್ನ ಹತ್ತಿರವೂ  ಬೆನ್ನು ಗುದ್ದಿದ್ದು  ಸಾಕು  ಪುಟ್ಟಿ, ನೀನು  ಹೋಗಿ ಮಲಗಿಕೊ ಎಂದು ಮುಸುಕು ಹಾಕಿ ಮಲಗಿ ಬಿಡುತ್ತಿದ್ದಳು.
ಅವತ್ತು  ಗಂಡಿನ  ಕಡೆಯವರು,  ಅಕ್ಕನ ಮದುವೆ ನಿಶ್ಚಿತಾರ್ಥಕ್ಕೆ  ಬಂದ ದಿನ, ಎಷ್ಟು ಚೆನ್ನಾಗಿತ್ತು. ಮನೆ ತುಂಬಾ ನೆಂಟರು.  ಎಷ್ಟೊಂದು  ಬಗೆಯ ಸಿಹಿ ತಿಂಡಿಗಳು. ಸಂಭ್ರಮವೋ ಸಂಭ್ರಮ.  ಆದರೆ ಅಕ್ಕ  ಮಾತ್ರ ಆವತ್ತಿನಿಂದ ಡಲ್ ಆಗ್ಬಿಟ್ಟಿದ್ದಳು.  ದಿನಾಲು ಬೆಳಿಗ್ಗೆ  ನಾನು ಅಕ್ಕನ ಜೊತೆ ಹೂ ಕೀಳಲು ಹೋದಾಗ,  ಎಷ್ಟೊಂದು  ಮಾತನಾಡುವವಳು.  ಈಗ ಮಾತ್ರ ಮಾತಿಲ್ಲ,  ನಗುವಿಲ್ಲಾ. " ಅಷ್ಟೊಂದು  ಉತ್ಸಾಹದ  ಚಿಲುಮೆಯಾಗಿದ್ದವಳು  ಯಾಕೆ ಹೀಗೆ ಮೌನ ಗೌರಿಯಾಗಿದ್ದಾಳೆ.  ಮದುವೆ ಹೆಣ್ಣು, ಮೈ ಕೈ ತುಂಬಿ ಕೊಳ್ಳುವ ಬದಲು, ಎಷ್ಟೊಂದು  ಇಳಿದು ಹೋಗಿದ್ದಾಳೆ. ಆ ಹುಡುಗನೇ ಈಗ ಬಂದು ನೋಡಿದರೆ ಅವನಿಗೆ ಇವಳ  ಗುರುತೂ  ಸಿಗಲಿಕ್ಕಿಲ್ಲಾ."  ಎಂದೆಲ್ಲ  ಅಮ್ಮ ಪೇಚಾಡುತ್ತಲೇ  ಇದ್ದಳು .  ನನಗೆ  ಅಮ್ಮನ ನೋಡಿದಾಗ,   ಒಂದು ಸಲ ಬೇಸರವಾದರೂ,  ಅಕ್ಕನ ಮದುವೆ  ಎಂದು ತುಂಬಾ ಖುಶಿನೇ  ಆಗಿತ್ತು.  ನಮಗೆಲ್ಲಾ  ಎರಡೆರಡು ಹೊಸಾ ಡ್ರೆಸ್ಸಿನ ಜೊತೆಗೆ ಮನೆಯ ಮೊದಲನೇ ಮಗಳ ಮದುವೆ ಎಂದು ಮನೆಯ ಎಲ್ಲಾ ಹೆಣ್ಣು ಮಕ್ಕಳಿಗೂ,  ಅಪ್ಪ ಕಿವಿಗೆ ಝುಮಕಿನೂ  ಮಾಡಿಸಿದ್ದರು.   ನಾವು ಮನೆಯ ಮಕ್ಕಳೆಲ್ಲರೂ  ಸೇರಿ  ಬಹಳ ಸಂತೋಷದಿಂದಾ ಮದುವೆ  ತಯಾರಿಯಲ್ಲೇ ಮುಳುಗಿಬಿಟ್ಟಿದ್ವಿ.

ಮದುವೆಗೆ  ಇನ್ನು  ಎರಡು ದಿನ  ಇದೆ ಅನ್ನುವಾಗ,  ನಾವಲ್ಲಾ ಸೇರಿ ಮೆತ್ತಿಯ ಮೇಲೆ  ಪನಿವಾರದ  ಪೊಟ್ಟಣ  ಮಾಡ್ತಾ ಇದ್ವಿ. ಆಗ ಅಮ್ಮ, ಕಣ್ಸನ್ನೆಯಲೇ ನನ್ನ ಅವಳ ಕೋಣೆಗೆ ಕರೆದಳು. ಆಗ ಅವಳ  ಮುಖದಲ್ಲಿ   ಸ್ವಲ್ಪ ಆತಂಕ  ಇತ್ತು  ಅಂತ  ನನಗನಿಸ್ತು. ಮತ್ತು ಅವಳು ನನಗೆ ಹೇಳಿದಳು.   ಅಕ್ಕ ಮದುವೆ ಮರುದಿನವೇ ಅವಳ ಗಂಡನ ಮನೆಗೆ ಹೋಗ್ತಿದ್ದಾಳೆ ಪುಟ್ಟಿ,  'ನಿನಗೆ ಹೇಗೂ ಈಗಾ ಎರಡು ತಿಂಗಳ ರಜೆ ಇದೆ.  ನೀನು ಅಕ್ಕನ ಜೊತೆಗೆ  ಹೋಗ್ತಿಯಾ?'  ಅಂತ ಕೇಳಿದಳು. ಅಯ್ಯೋ  ಎರಡು ತಿಂಗಳ ರಜದಲ್ಲಿ ಇಡೀ  ಕೇರಿಗೆ ಎಷ್ಟೊಂದು  ಸ್ನೇಹಿತೆಯರು ಬರುತ್ತಾರೆ. ಗುಡ್ಡಬೆಟ್ಟಗಳನ್ನೆಲ್ಲ ಸುತ್ತಾಡಿ ಮುಳ್ಳೇಹಣ್ಣುಗಳನ್ನ ಕೊಯ್ಯುವುದು, ಕೊಕ್ಕಾರ ಹೊಳೆಯಲ್ಲಿ ಈಜುವುದು, ದ್ಯಾವನ ಬ್ಯಾಣದ ಮೇಲೆ ಲಗೋರಿ ಆಡುವುದು,  ಎಷ್ಟೊಂದು ಮಜಾ ಮಾಡುವುದಿತ್ತು. ಇದನ್ನೆಲ್ಲಾ ಬಿಟ್ಟು ಅಕ್ಕನ ಜೊತೆ ಹೋಗಬೇಕಾ?  ರವಿಯಣ್ಣ ಬೇರೆ ಅಕ್ಕನ  ಹತ್ತಿರ  ಹೇಳ್ತಿದ್ದ.  'ಎಂತೆ ತಂಗಿ ನಿನ್ನೂರು ಅಂದ್ರೆ, ಅತ್ಲಾಗೆ ಹಳ್ಳಿಯ  ಸೊಗಡೂ ಇಲ್ಲೆ. ಇತ್ಲಾಗೆ ಪೇಟೆಯ ಮಜಾನು ಇಲ್ಲೆ.  ಆ ಕಾಲೋನಿ ಲೈಪ್ ಅಂದ್ರೇ ಬೇಜಾರು'  ಅಂತ.  ಆದರೆ  ಈಗ ನಾನು ಹೋಗುವದಿಲ್ಲ ಅಂತ,  ಅಮ್ಮಂಗೆ ಹ್ಯಾಗೆ ಹೇಳಲಿ?

 ಅಮ್ಮ,  ನನಗೆ ಹಾಗು  ಅಕ್ಕನಿಗೆ   ಮಾತಿಗೆ  ಸಿಕ್ಕುವುದೇ  ಕಡಿಮೆ.  ಅಮ್ಮನಿಗೆ  ಬಿಡುವು  ಇರುವುದೇ   ಇಲ್ಲಾ.  ಅವಳು ಯಾವಾಗಲು ಏನಾದರು ಕೆಲಸ ಮಾಡುತ್ತಲೇ  ಇರುತ್ತಾಳೆ. ನನಗೆ ಅಮ್ಮ  ಬೇಕು  ಅನಿಸಿದಾಗಲೆಲ್ಲಾ ನಾನು ಅವಳ ಹಿಂದೆಯೇ ತಿರಗುತ್ತಿರುತ್ತೇನೆ. ಆವಾಗಲೇ ಅವಳು ನನ್ನ ಸ್ಕೂಲ್ ಬಗ್ಗೆ,  ಗೆಳತಿಯರ ಬಗ್ಗೆ , ಏನಾದರು  ಕೇಳುವುದು. ಇಲ್ಲವಾದರೆ ಅಮ್ಮ ಮೇಲಿನ ಕೊಟ್ಟಿಗೆಯ ಹತ್ತಿರ ಇರೋ ಹಿತ್ಲಿಗೆ ನೀರು ಹಾಕಲು ಹೋದಾಗ  ಬಹಳ ಸಲ ನಾನೂ  ಅವಳ ಜೊತೆ ಹೋಗ್ತೇನೆ .  ಅಮ್ಮ ಆಗ   ಗಿಡಕ್ಕೆ ನೀರು ಹಾಕುತ್ತಲೋ, ಗೊಬ್ಬರ ಹಾಕುತ್ತಲೋ, ನನ್ನ ಹತ್ತಿರ ಮಾತಾಡುತ್ತ ಇರುತ್ತಾಳೆ.  ಇತ್ತಿಚೆಗಂತಲೂ ಅಮ್ಮ, 'ನೀ ಬರುವಾಗ, ಅಕ್ಕನ್ನು ಕರೆದುಕೊಂಡು ಬಾ.  ಅವಳಂತೂ ಇತ್ತೀಚಿಗೆ  ಮೂದೇವಿನೆ  ಆಗ್ಬಿಟ್ಟಿದ್ದಾಳೆ.  ಅವಳ ಹತ್ತಿರ  ಒಂದಿಷ್ಟು  ಮಾತನಾಡಬೇಕು' ಎನ್ನುತ್ತಾಳೆ.  ಆದಕ್ಕೆ  ಈಗ ಅಲ್ಲಿಯೂ  ಅಮ್ಮ ನನಗೆ  ಮಾತಿಗೆ ಸಿಗುವುದೇ ಇಲ್ಲಾ.   ಈಗ ಅಮ್ಮ ಇಷ್ಟು ಪ್ರೀತಿಯಿಂದಾ ನನ್ನ ಹತ್ತಿರ,  ಅಕ್ಕನ ಜೊತೆಗೆ ಹೋಗ್ತಿಯಾ ಮರಿ  ಅಂದಾಗ,   ನಾನು  ಹೋಗುವುದಿಲ್ಲ  ಅಂತ ಹೇಗೆ ಹೇಳಲಿ?   ನಾನು ಅಮ್ಮನ ಮುಖವನ್ನೇ ನೋಡಿದೆ.  ನಾನು 'ಹೂಂ' ಅನ್ನುವದರಲ್ಲೇ  ಅಮ್ಮ ನನ್ನನ್ನು ತನ್ನ ಎದೆಗವಚಿ ಹಿಡಿದುಕೊಂಡು,   'ಪುಟ್ಟಿ, ನಿನಗೆ ನನ್ನ ಬಿಟ್ಟು ಹೋಗಲು ಮನಸ್ಸಿಲ್ಲ ಅಂತ ನನಗೆ ಗೊತ್ತು ಮರಿ,  ಆದರೆ  ನಿನ್ನ ಅಕ್ಕನ ಮೇಲೆ ನನಗೆ ಭರವಸೆಯೇ ಹೊರಟು ಹೋಗಿದೆ  ಪುಟ್ಟಿ. ಈ ಅವತಾರವನ್ನೇ ಅವಳ ಗಂಡನ  ಹತ್ತಿರವೂ ಮುಂದುವರಿಸಿದರೆ  ಏನ್ಮಾಡೋದು?  ಈಗ ನಮ್ಮ ವಂಶಕ್ಕೆ  ಗೌರಿ ಚಿಕ್ಕಿ  ಒಬ್ಬಳೇ  ಸಾಕು.  ಗಂಡನ ಬಿಟ್ಟು ಬಂದವಳು ಅಂತ  ಹೇಳಿಸಿ ಕೊಳ್ಳಲಿಕ್ಕೆ.  ನಾನು  ಅಕ್ಕನಿಗೆ  ಎಲ್ಲಾ ಹೇಳಿ ಕಳುಹಿಸ್ತೇನೆ. ನೀನು ಅವಳ ಜೊತೆಗೆ ಹೋಗು.  ಅವಳು ಸುಧಾರಿಸುತ್ತಾಳೊ  ನೋಡೋಣ.  ನೀನು ಅವಳ ಜೊತೆ ಇದ್ದರೆ  ನನಗೆ  ಅವಳ ವಿಷಯವಾದ್ರು  ತಿಳಿಯುತ್ತದೆ.  ಇಲ್ಲದೆ ಹೋದ್ರೆ  ಅವಳು  ಹೇಗಿದ್ದಾಳೆ?  ಏನು? ಅಂತ ನನಗೆ ಗೊತ್ತಾಗುವುದಾದರೂ  ಹೇಗೆ?  ಒಂದು ತಿಂಗಳ ಬಿಟ್ಟು  ನಾನು ಅಪ್ಪನ್ನ  ಕಳುಹಿಸ್ತೇನೆ.  ಅಕ್ಕ ಮೊದಲಿನ  ಹಾಗೆ ನಗ್ತಾ ನಗ್ತಾ ಖುಷಿಯಲ್ಲಿ ಇದ್ರೆ ನೀನು ಅಪ್ಪನ ಜೊತೆ ಮನೆಗೆ ಬಂದ್ಬಿಡು ಆಯ್ತಾ'.  ಎಂದು  ಅಮ್ಮ ನನಗೆ ತುಂಬಾ ಮುದ್ದು ಮಾಡಿದಳು.

ಅಕ್ಕನ ಮದುವೆ ಬಹಳ ಸಂಭ್ರಮದಲ್ಲೇ  ಮುಗಿಯಿತು. ಅಮ್ಮ ಹೇಳಿದಂತೆ ನಾನು ಅಕ್ಕ ಭಾವನ  ಜೊತೆಗೆ ಹೊಸ ನಗರಕ್ಕೆ ಬಂದಾಗಿತ್ತು.  ಭಾವ ಬಹಳ ಒಳ್ಳೆಯವರಾಗಿದ್ರು. ಹೊಸ ನಗರವೂ   ತುಂಬಾ ಚಂದವಾಗಿತ್ತು. ಎಲ್ಲಾ ಒಂದೇ ಥರದ ಮನೆಗಳು. ಅಲ್ಲಿದ್ದ ದೊಡ್ಡ ದೊಡ್ಡ ರೋಡ್ ಮೇಲೆಯೇ  ಆಟ ಆಡಬಹುದಾಗಿತ್ತು. ಅಮ್ಮ ಹೇಗೂ ನನಗೆ ಚಿನ್ನಿ, ದಾಂಡು, ಗೋಲಿ, ಬಾಲ್ , ಎಲ್ಲಾ  ಆಟಿಕೆಗಳನ್ನು ಕಳುಹಿಸಿದ್ದಳು .  ಮೊದಲೆರಡು ದಿನ  ನಾನೊಬ್ಬಳೆ ಆಟ ಆಡಿಕೊಂಡೆ.  ಆಮೇಲೆ  ಅಕ್ಕ ಪಕ್ಕದ ಮಕ್ಕಳೆಲ್ಲಾ ಬಂದು  ಸೇರಿಕೊಂಡರು. ರವಿಯಣ್ಣ ಹೇಳಿದ ಹಾಗೆ ಈ ಊರು ಬೋರಾಗೆನಿರಲಿಲ್ಲಾ. ಅಮ್ಮ ನನಗೆ ಬರುವಾಗ ಹೇಳಿದ್ದಳು 'ಅಕ್ಕನ ರೂಮಿಗೆ ಹೋಗಬೇಡ. ಅವರಿಬ್ಬರ ಮಧ್ಯೆ ಹೆಚ್ಚಾಗಿ ಇರಬೇಡಾ.  ನಿನಗೆ ಬೇಸರ ಬಂದರೆ ನಿನ್ನ  ಚೀಲದಲ್ಲಿ  ಚಿತ್ರದ ಪುಸ್ತಕ ಹಾಕಿರ್ತೇನೆ. ಏನಾದರು ಚಿತ್ರ ಬಿಡಿಸುತ್ತ ಇರು 'ಎಂದು. ಹೊಸ ಊರು  ಹೊಸ ಗೆಳತಿಯರು   ನಾನು  ಖುಶಿಯಾಗೇ  ಇದ್ದೆ.  ಆಮೇಲೆ  ದಿನ  ಕಳೆದಂತೆ  ರಾತ್ರಿ  ನನಗೆ  ಅಮ್ಮನ  ನೆನಪಾಗಿ  ಅಳು  ಬರುತ್ತಿತ್ತು.  ಪಾಪ  ಅಕ್ಕ, ಹಸಿವೆಯಾಗುತ್ತಾ,  ಬೇಸರ ಬರುತ್ತಾ,  ಅಂತ ಕೇಳ್ತಾನೆ  ಇರುತ್ತಿದ್ಲು. ಭಾವನೂ ತುಂಬಾ ಚೆನ್ನಾಗೆ ಮಾತನಾಡಿಸುತಿದ್ರು. ಆದ್ರೆ ನನಗೇಕೋ  ಮನೆಗೆ ಹೋಗ್ಬೇಕು.  ಮತ್ತು ಅಮ್ಮನ ನೋಡ್ಬೇಕು ಅಂತಾ ತುಂಬಾ ಅನಿಸ್ತಿತ್ತು. ಆದರೆ ಅಮ್ಮ ಹೇಳಿದ ಹಾಗೆ  ಅಕ್ಕ  ಖುಷಿಯಾಗಿ  ಇದ್ದಾಳೋ  ಇಲ್ಲವೋ  ಅಂತಾನೆ  ನನಗೆ ಗೊತ್ತಾಗ್ತಿರಲಿಲ್ಲಾ.   ಒಂದೊಂದು  ದಿನ   ಭಾವ ಹೊರಗೆ ತಿರುಗಾಡಿ ಬರೋಣ  ಎಂದರೆ, ಅಕ್ಕ,  ಹೋಗದೆ  ಸುಮ್ನೆ ಜೋಲು ಮುಖ  ಮಾಡಿಕೊಂಡು  ಮನೆಯಲ್ಲೇ  ಕೂತಿರುತಿದ್ಳು.   ಮತ್ತೆ  ಒಂದೊಂದುದಿನ   ತಾನಾಗಿಯ ಭಾವನ  ಜೊತೆ  ಹೊರಗೆ ತಿರುಗಾಡಲು  ಹೋಗುತ್ತಿದ್ದಳು.  ಬರುವಾಗ  ಏನಾದರು ಪುಸ್ತಕಾನೋ, ಡ್ರೆಸ್ಸನ್ನೊ  ತಂದುಕೊಳ್ಳುತ್ತಿದ್ಲು.  ಆಗೆಲ್ಲಾ  ಅವಳಿಗೆ ಬಹಳ  ಖುಶಿ. ನನಗೂ ಎಷ್ಟು ಪ್ರೀತಿಯಿಂದಾ ಚೋಕಲೇಟೋ, ಕೇಕೋ, ತರುತಿದ್ಲು. ಆದರೆ ಕೆಲವೊಂದು  ದಿನ ಇದ್ದಕ್ಕಿದ್ದ ಹಾಗೆ,  ಬೆಳಿಗ್ಗೆಯಿಂದಾ  ರಾತ್ರಿವರೆಗೂ  ಮಾತಿಲ್ಲಾ ಕಥೆ ಇಲ್ಲಾ.  ಇಡೀ ದಿನವೂ ಮೌನವೇ. ಆದರೆ ಬೆಳಿಗ್ಗೆ ಏಳುವಷ್ಟರಲ್ಲಿ ಅಕ್ಕ ಉತ್ಸಾಹದ ಚಿಲುಮೆಯಾಗಿರುತಿದ್ಲು.  ಅವಳು ಒಂದು ದಿನ ಹಾಗಿದ್ರೆ, ಇನ್ನೊಂದು ದಿನ ಹೀಗಿರುತ್ತಿದ್ಲು.   ಹಾಗಾಗಿ  ನನಗೆ,  ಅಕ್ಕ ಖುಷಿಯಾಗಿ ಇದ್ದಳೋ ಇಲ್ಲವೂ  ಅಂತಾನೇ   ಗೊತ್ತಗ್ತಾ  ಇರ್ಲಿಲ್ಲಾ.  ಮತ್ತು ನಾನು ಅಪ್ಪನ ಜೊತೆ ಊರಿಗೆ ಹೋಗುವುದೋ ಬಿಡುವುದೋ ಅಂತಾನು ಗೊತ್ತಾಕ್ತ  ಇರ್ಲಿಲ್ಲಾ.   ದಿನವಿಡೀ  ಅದೊಂದೇ  ಯೋಚನೆ ಆಗ್ಬಿಡ್ತಿತ್ತು  ನನಗೆ.