Thursday, January 28, 2010

ಸಾಗುತ ಸಾಗುತ ದೂರಾ ದೂರಾ




ಬೀಸುವ  ಗಾಳಿಗೆ,  ಬೀಳುವ  ಮಳೆಗೆ, ಸುರಿಯುವ  ಹಿಮಕ್ಕೆ,  ಹರಿಯುವ  ತೊರೆಗೆ,  ವಿವಿಧ  ಬಣ್ಣಗಳಿಂದ  ಕಂಗೊಳಿಸುವ ಮರಗಿಡಕ್ಕೆ, ಅದರದೇ   ಆದ  ರೂಪ,  ಸೌಂದರ್ಯ, ವನಪು, ವೈಯ್ಯಾರ. ಸವೆಸುವ  ದಾರಿಯಲಿ ಸವಿಯುವ  ಮನಸೊಂದಿದ್ದರೆ  ಎಲ್ಲವೂ  ಚಂದ  ಚಂದವೇ. ಹಸಿರ  ವನಸಿರಿಯಲ್ಲಾ  ತಮ್ಮಷ್ಟಕ್ಕೆ ತಾವೇ ಹೊಸ ತೊಡುಗೆ  ತೊಟ್ಟು, ಕಣ್ ಮನ ತಣಿಸುವ  ಪರಿಯೇ  ಅನನ್ಯ. ಅವುಗಳ ಮೇಲೆ ಕಣ್ಣ  ಹಾಯಿಸಿದುದ್ದಕ್ಕೂ  ಹಳದಿ, ಕೆಂಪು, ಪೀತಾಂಬರ, ವಿವಿಧ  ಬಣ್ಣಗಳ  ರಾಶಿ. ಕಣ್ಣು ಅವುಗಳ ಬಣ್ಣವನ್ನು ಗುರುತಿಸಲೂ ಸೋಲುತ್ತವೆ. ಈ  ಅಪರೂಪದ  ಸೌಂದರ್ಯವನ್ನ  ಕಣ್  ತುಂಬಿಸಿಕೊಳ್ಳುವಷ್ಟರಲ್ಲಿಯೇ ಎದುರು   ನಿಂತ  ದೃಶ್ಯ   ನಯನ ಮನೋಹರವಾದ  ಜಲಪಾತ.   ಭೋರ್ಗರೆವ  ಜಲರಾಶಿಯ  ಎದುರು ನಿಂತು,  ಅದರ  ಸೊಬಗಿಗೆ  ಮೈ ಮರೆಯುವ  ಕ್ಷಣಕ್ಕೆ  ಅದೆಂತದೋ  ಧನ್ಯತಾ ಭಾವ. ಆ  ಸೌಂದರ್ಯದ   ಮತ್ತಿಗೆ  ಮಾತಲ್ಲ,  ಉಸಿರೇ  ನಿಂತ  ಅನುಭವ.   ಮುಂದುವರಿದ   ದಾರಿಯಲ್ಲಿ ಇದ್ದಕ್ಕಿದ್ದ ಹಾಗೆ  ಹಸುರು   ಹುಲ್ಲಿನ  ಮೇಲೆ  ಸುರಿದ  ಹಿಮರಾಶಿಗೆ   ಅದೆಂಥಾ   ಸೊಬಗು.   ಹಿಮದಿಂದ  ಆವೃತವಾದ  ಪ್ರಕೃತಿ,  ಶುಭ್ರವಸನೆಯಾಗಿ  ಮೈ ತಳೆದು   ನಿಂತಂತಾ ಭಾವ. ಹತ್ತಿಯಷ್ಟೇ  ಹಗುರಾದ  ಹಿಮ ಮಣಿ  ಮೈ  ಸ್ಪರ್ಶಿಸಿದಾಗ  ಅದೆಂಥಾ ಪುಳಕ! ಈ ಸುಂದರ  ದಾರಿಯಲ್ಲಿ  ಸಾಗಿ ಬಂದ  ದೂರವೇ ಗೊತ್ತಾಗಲಿಲ್ಲಾ.  ಇನ್ನೇನು  ಪಯಣವೇ ಮುಗಿದು ಹೋಯಿತು.  ಇದು  ಇಷ್ಟು ಬೇಗ ಮುಗಿದು ಹೋಯಿತೇ  ಎಂದು  ಅಂದುಕೊಂಡಿದ್ದು  ಸಾವಿರ  ಸಲ.

ಬಂದ ದಾರಿಯಲ್ಲಿ ಒಮ್ಮೆ ಹಿಂತಿರುಗಿ ನೋಡಿದರೆ....ಈ ಪಯಣಕ್ಕೆ  ನಡೆಸಿದ  ಸಿಧ್ಧತೆ ಕಡಿಮೆಯಾ ?  ಎಷ್ಟೋ  ದಿನದ ಚಿಂತನ ಮಂಥನಗಳ  ನಂತರ   ಪ್ರಯಾಣದ ನಿರ್ಧಾರ. ನಿರ್ಧಾರ  ತೆಗುದು ಕೊಂಡ ನಂತರವೂ ಕೂಡಾ  ಇದು ಸಾಧ್ಯವಾ?  ಅನ್ನುತ್ತಿತ್ತು  ಮನ ನೂರು  ಸಲ. ಈ  ಮನೆಯ ಒಂಟಿತನಕ್ಕೆ ಯಾರು ಜೊತೆ?  ಮನೆಯ ಕಾಯುವ  ಜೂಲಿ, ಮನೆಯ ಅಂಗಳದ ಗಿಡಗಳು,  ಸುತ್ತಿಕೊಂಡ  ಸಂಸಾರಗಳು,  ಒಂದಾ ಎರಡಾ ಸಮಸ್ಯೆಗಳು. ಅವುಗಳಿಗೆಲ್ಲಾ  ಪರಿಹಾರ   ಸಿಕ್ಕ  ಭಾವದ  ನಂತರ  ಕಾಡಿದ್ದು   ಭಾವುಕ  ಜಗತ್ತು.  ಒಂದೆರಡಲ್ಲ  ಆರು  ತಿಂಗಳು,  ಅಕ್ಕ ಪಕ್ಕದ ಸ್ನೇಹಿತೆಯರು, ನೆಚ್ಚಿಕೊಂಡ  ಸ್ವರ  ಸಾಮ್ರಾಜ್ಯ,  ಅರ್ಧ  ಓದಿಟ್ಟ   ಕಾದಂಬರಿಯ  ಪುಟಗಳು, ಇವೆಲ್ಲವನ್ನೂ ದಾಟಿ  ಹೊರಟಾಗ   ಏಳೋ ಹನ್ನೊಂದೋ.

ಪಶ್ಚಿಮ ಎಂದರೆ ಏನೋ ಕುತೂಹಲ. ಪಶ್ಚಿಮದಲ್ಲಿ  ಎಲ್ಲವೂ ನವನವೀನ. ಅಲ್ಲಿ ಬೀಸುವ ಗಾಳಿಯು ಹೊಸ ಗಾಳಿ ಎಂಬ ಭಾವ  ಪೂರ್ವಕ್ಕೆ.  ಆದರೆ  ಆ  ದಾರಿಗೆ ಮುಖ ಮಾಡಿ  ನಿಂತಾಗಲೇ   ಗೊತ್ತು, ಅದರ ತವಕ ತಲ್ಲಣಗಳು.  ಇಲ್ಲಿ  ತುಳಿವ  ದಾರಿ  ಹಿಂದೆ ನಡೆದ  ದಾರಿಗಿಂತಲೂ ಭಿನ್ನ ಎಂಬ ಪ್ರಜ್ಞೆಗೇ,  ಅಡಿಗಡಿಗೂ ಅನುಮಾನ, ಆತಂಕಗಳು.  ಆತಂಕದ  ನಡುವೆಯೇ   ಇಡುವ   ಉತ್ಸಾಹದ   ಹೆಜ್ಜೆ.   ಈ ಪಯಣದ  ಆರಂಭವೇ   ಒಂದು ಸೋಜಿಗ.   ಇತ್ತ  ಭುವಿಯೂ  ಅಲ್ಲದ,  ಅತ್ತ ಆಗಸವೂ  ಅಲ್ಲದ,  ಆ ಆಕಾಶಯಾನ  ವರ್ಣನೆಗೆ ನಿಲುಕದ್ದು. ನಾವು ಎಲ್ಲಿದ್ದೇವೆ  ನಮ್ಮ ಅಸ್ತಿತ್ವವೇನು  ಎಲ್ಲಾ ಗೋಜಲು ಗೋಜಲು ಅನಿಸಿಕೆಗಳು . ಪೂರ್ವವೂ ಅಲ್ಲದ, ಪಶ್ಚಿಮವೂ ಅಲ್ಲದ,  ರಾತ್ರಿಯೂ  ಅಲ್ಲದ, ಹಗಲೂ  ಅಲ್ಲದ,  ನಿದ್ರೆಯೂ  ಅಲ್ಲದ, ಎಚ್ಚರವೂ  ಅಲ್ಲದ,  ಅದೊಂದು ತ್ರಿಶಂಕು ಸ್ಥಿತಿ.  ಈ  ಸ್ಥಿತಿಯಲ್ಲೇ , ರಾತ್ರಿಯು   ಹಗಲಾಗಿ , ಹಗಲು  ರಾತ್ರಿಯಾಗುವ ಸಮಯದಲ್ಲಿ,  ಮತ್ತೆ   ಭೂಸ್ಪರ್ಶ.  ಆಗ  ಮನಕ್ಕೆ  ಒಂದು ತರಹದ  ಬಂಧ  ಮುಕ್ತದ  ಭಾವ.   ಹೊಸ ನೆಲ. ಹೊಸ  ಹೊಸ  ಮುಖ. ಸುತ್ತ ಮುತ್ತೆಲ್ಲವೂ   ಹೊಸತು. ಮೈಯಲ್ಲಾ  ಕಣ್ಣಾಗಿ, ಕಿವಿಯಾಗಿ.........ಇಡೀ ಪಂಚೆಂದ್ರಿಯವೇ  ಆಗಿ, ಹೊಸ ಜಗತ್ತನ್ನು ನೋಡುವ ಕಾತುರ.

ಜನಜಂಗುಳಿ ಇಲ್ಲದ ವಿಶಾಲವಾದ ರಸ್ತೆ.  ಶರವೇಗದಲ್ಲಿ  ಸಾಗಿದರೂ,  ಸ್ಪರ್ಧೆಗಿಳಿಯದೆ  ಸಾಗುವ  ವಾಹನಗಳು.  ಝಗಮಗಿಸುವ    ದೀಪಗಳಿಂದ ಸಾಲಂಕೃತಗೊಂಡ ದಾರಿಯಲ್ಲಿ ಹೀಗೆ ಸಾಗುತ್ತಲೇ ಇದ್ದುಬಿಡೋಣ ಅನ್ನುವ  ಬಯಕೆ.

ಹಿತವಾದ ತಂಪುಗೊಳಿಸಿದ ವಾಹನದ ಕೆಳಗಿಳಿದು, ದೃಷ್ಟಿ ಹೊರ ನೆಟ್ಟಾಗ  ಕಣ್ಸೆಳೆದದ್ದು, ಸುತ್ತಲಿನ ಹಚ್ಚಹಸುರಿನ ಪ್ರಪಂಚ. ಹುಡುಕಿದರೂ    ಕಸ ಕಡ್ಡಿ  ಸಿಗದ  ಸ್ವಚ್ಛ  ಪ್ರಶಾಂತ  ವಾತಾವರಣ.  ಅದರ  ನಡುವೆ ಶಾಂತ ಬಣ್ಣದಲ್ಲಿ ಅದ್ದಿ ನಿಲ್ಲಿಸಿದಂಥ  ಮಾಟವಾದ  ಮನೆ.   ಮನೆ,  ಮನದಲ್ಲಿ    ಆವರಿಸಿಕೊಂಡ    ಅತ್ಮಿಯತೆಗೆ, ಪ್ರೀತಿಗೆ, ತ್ಯಾಗಕ್ಕೆ  ಭರವಸೆಗೆ  ಯಾವ  ಹೋಲಿಕೆ?  ಚಿಗುರನ್ನು  ಹುಡುಕಿಕೊಂಡು  ಬಂದ  ಬೇರಿಗೆ  ತಂಪೆರೆದಷ್ಟೂ   ಕಡಿಮೆ ಎಂಬ  ಭಾವ   ಚಿಗುರಿಗೆ.  ಊಟ, ಉಪಚಾರ, ಮಾತು ಕಥೆಗಳಲ್ಲೇ   ದಿನದ   ಪೂರ್ಣತೆ.  ಪಶ್ಚಿಮ, ತನ್ನ ಅತಿಥಿಗಳಿಗಾಗಿ   ತೆರೆದ   ರಾತ್ರಿಯ  ಕದದೊಳಗಿಂದ   ಸುರಿದದ್ದು,  ನಿಶ್ಯಬ್ದ,  ನೀರವ  ವಾತಾವರಣ. ತಂಪಾದ ಗಾಳಿ . ಆದರೆ ಸೊಂಪಾದ  ನಿದ್ದೆಗೆ,   ಮನ  ಇದು  ರಾತ್ರಿ  ಎಂದು   ನಂಬಿಸಿದರೂ  ದೇಹಕ್ಕೆ ಎಲ್ಲಿಯ  ಅರಿವು?  ಕಣ್ಣ  ರೆಪ್ಪೆಗೆ  ಒಂದೊನ್ನೊಂದ   ಅಪ್ಪಿಕೊಳ್ಳಲಾರದ   ಸ್ಥಿತಿ. ಅದರ  ಅಸ್ತಿತ್ವ  ಇನ್ನೂ  ಪೂರ್ವದಲ್ಲೇ. ಅವುಗಳಿಗೆ  ಅಲ್ಲಿಯದನ್ನು  ಬಿಟ್ಟಿರಲಾಗದ   ಇಲ್ಲಿಯದನ್ನು  ಮುಟ್ಟಲಾರದ  ಹೊಯ್ದಾಟ.  ಎಲ್ಲವೂ  ಸುಂದರ, ಸುಖ, ಸೌಲಭ್ಯ, ಶಿಸ್ತು, ಅಚ್ಚುಕಟ್ಟು,ನೀಟು. ಆದರೆ ಮನಕ್ಕೆ   ಅದೆಲ್ಲದರ  ಜೊತೆಯಲ್ಲೂ  ಪೂರ್ವದ್ದೆ  ಹೋಲಿಕೆ . ತನ್ನ ನೆನಪಿನ  ಕೋಶದಲ್ಲಿ  ಭದ್ರವಾಗಿ  ತಳವೂರಿದ  ನೆನಪುಗಳ  ನೆರಳಿನಲ್ಲಿಯೇ  ಅದರ  ಬದುಕು.  ಹಾಗೂ ಅಲ್ಲಿಯದೇ  ಚೆನ್ನವಾ ಎಂಬ ಸಣ್ಣ ಅನುಮಾನ   ಸದಾ  ಅದರ  ಜೊತೆಗೇ.  ಅಲ್ಲಿಯೂ ಇಲ್ಲದ  ಇಲ್ಲಿಯೂ ಸಲ್ಲದ ಭಾವ ಅದೆಷ್ಟೋ  ದಿನದವರೆಗೂ.  ಹೊಸತನ್ನು  ಪಡೆಯುವದರ  ಜೊತೆ ಜೊತೆಗೇ,  ಪೂರ್ವದಲ್ಲಿಯ  ನಡೆದಾಡಿದ ನೆಲ, ಕೇಳಿದ ಮಾತು,  ಓದಿದ   ಪುಸ್ತಕ, ನೋಡಿದ  ದೃಶ್ಯ, ಮಾಡಿದ  ದಿನಚರಿ, ಎಲ್ಲದರ ನೆನಪು,ಮೆಲುಕಾಟ,   ದಿನವೂ ಒಂದಲ್ಲ ಹತ್ತಾರು ಬಾರಿ. ಇದು  ಯಾರದೋ, ಇವರು ಯಾರವರೋ, ಎನ್ನುವ ಮನ, ಇದೂ ನಮ್ಮದು, ಇವರೂ ನಮ್ಮವರು ಅನ್ನಲು ಶುರುವಿಟ್ಟು ಕೊಂಡಿದ್ದು ಎಷ್ಟೋ  ಕಾಲದ  ನಂತರ.

ಮುಚ್ಚಿಕೊಂಡ ಬಾಗಿಲ  ಆಚೆ  ಅದೆಷ್ಟು ಮಾತುಗಳು, ಮುಖಗಳು, ಭಾವಗಳು. ಮನ ತೆರೆದುಕೊಂಡಾಗಲೇ ಅದಕ್ಕೆ  ತುಂಬಿಕೊಳ್ಳುವ ಶಕ್ತಿ. ಬಾಗಿಲ ತೆಗೆದು ಅವುಗಳನ್ನು ಕರೆದು ಮನ ತುಂಬಿಸಿಕೊಂಡಾಗ.   ಅದು  ಆದದ್ದು ಎಷ್ಟು ವಿಸ್ತಾರ. ಭಾಷೆಗಳು ಬೇರೆಯಾದರು  ಮಾತು   ಒಂದೇ, ರೂಪಗಳು  ಬೇರೆಯಾದರು  ಮನಸ್ಸು  ಒಂದೇ, ರೀತಿಗಳು ಬೇರೆಯಾದರು ಭಾವ ಒಂದೇ ಎಂಬ ಅರಿವಿಗೆ,  ಹೊಸ ಜಗತ್ತೇ  ತೆರೆದುಕೊಂಡ ಹರುಷ.  ಆ ಹೊಸ ಜಗತ್ತಿನ ತುಂಬಾ  ಮನೋ  ವಿಹಾರ. ಇಲ್ಲಿ   ಒಂದೊಂದಾಗಿ  ತೆರೆದುಕೊಂಡ  ಪುಟಗಳು  ಎಷ್ಟೋ! ಆ ಪುಟದ ತುಂಬಾ  ಬಿಡಿಸಿದ  ಚಿತ್ರಗಳು, ಅವಕ್ಕೆ  ತುಂಬಿದ ಬಣ್ಣಗಳು,  ಮೂಡಿಸಿದ ಅಕ್ಷರಗಳು, ಅವುಗಳಿಗೆ ಕೊಟ್ಟ ಅರ್ಥಗಳು ಒಂದಲ್ಲ ಹತ್ತಾರು ..... ........

ಈಗ  ದಾರಿಯ ಮುಕ್ತಾಯಕ್ಕೆ  ಬಂದು ನಿಂತು  ಬಿಟ್ಟ ಹೆಜ್ಜೆ. ಕಾಲಕ್ಕೆ ಅದರದ್ದೇ ಆದ  ಮಿತಿ. ನಮಗೆ ನಮ್ಮದೇ ಆದ  ಬಧ್ಧತೆ.  ಇಲ್ಲಿಂದ ಹಿಂದಕ್ಕೆ, ಪೂರ್ವ ಜಗತ್ತಿಗೆ  ಮರಳಲೇ  ಬೇಕು. ಆದರೆ  ಒಂದು  ಖುಶಿ ಎಂದರೆ  ಮರಳುವಾಗ ಜೊತಗೆ, ಒಂದಿಷ್ಟು ಅಮೂಲ್ಯ ಸರಕುಗಳನ್ನಾದರೂ ಒಯ್ಯುತ್ತಿದ್ದೇವಲ್ಲಾ, ಎಂದು. ಎದೆಯ  ಗೂಡೊಳಗೆ ಮತ್ತಷ್ಟು  ಗಟ್ಟಿಯಾಗಿ ಬೆಸೆದ ಚಿಗುರಿನ  ಮಮತೆಯನ್ನ,  ತೆರೆದುಕೊಂಡ  ಹೊಸ ಜಗತ್ತಿನ ಸ್ನೇಹಿತರ   ಬಳಗದ  ಪ್ರೀತಿಯನ್ನ, ಸ್ವರದಿಂದ  ಮುಂದಕ್ಕೆ ಚಲಿಸಿದ  ಆಲಾಪದ ಗುಂಗನ್ನ, ಪುಟಕ್ಕೆ ಇಳಿದ ಮಾತುಗಳಿಗೆ  ಸಾಕ್ಷಿಯಾಗುತ್ತಾ, ಕೊನೆಗೂ  ಪದಗಳ  ರೂಪ  ಕೊಡಲು  ಸೋತ  ಕೆಲವು ಭಾವಗಳನ್ನ.

18 comments:

ಸಾಗರದಾಚೆಯ ಇಂಚರ said...

ಉಮಾ, ನಿಮ್ಮ ಕವನಗಳನ್ನೇ ಓದಿದ್ದ ನಾನು ಇಂದು ಬರಹ ಓದಿ ಚಕಿತನಾದೆ
ಆ ಅದ್ಭುತ ಶಬ್ದಗಳು ಮನ ಸೂರೆಗೊಂಡವು
ಬದುಕಿನ ಆರಂಬದ ಸುಂದರ ಲೇಖನ
ಪ್ರಯಾಣದ ನಿರ್ಧಾರ, ಮಾಡಿದ ಶ್ರಮ ಎಲ್ಲವೂ ನೈಜವಾಗಿ ಮೂಡಿವೆ

SANTA said...

nmmadu....nammavaru enisikollalu sumaaru samaya hidiyuvudu yaakendare poorvada vichaara vishaya, anubhavagalu nammannu kidididuva kaaranakkaagi endu nanna anisike. haagaagiye manassu hosa change ge resist maaduttade modamodalu. konegoo ekataanateyannu meeruva hambalave hosadannu sweekarisuvante maaduttde! tumba chendaagi barediruve. good reading for me. Thanks

ದಿನಕರ ಮೊಗೇರ said...

ಉಮಾ ಮೇಡಂ,
ಭಾವನೆಗಳನ್ನು ಶಬ್ದಗಳಲ್ಲಿ ಹಿಡಿದಿಟ್ಟ ರೀತಿ ಚೆನ್ನಾಗಿದೆ.............. ನಿಸರ್ಗದ ವರ್ಣನೆ ಸೂಪರ್.....................

Narayan Bhat said...

ಪೂರ್ವ-ಪಶ್ಚಿಮ ಭಾವದ ಬೆಸುಗೆ.... ಲೇಖನ ಚೆನ್ನಾಗಿದೆ.

ಜಲನಯನ said...

ಉಮಾ, ನಿಮ್ಮ ಕವನದ ನಂತರ ಈ ಲೇಖನ ನನ್ನ ಮನಸ್ಸನ್ನ ಸೆರೆಹಿಡಿದಿದೆ, ಡಾ.ಗುರುಮೂರ್ತಿ ಹೇಳಿದ ಹಾಗೆ ಪ್ರವಾಸದ (ಅಥ್ವಾ ಪ್ರಯಾಸವೇ ಕೆಲವರಿಗೆ..?) ವಿವರಣೆ ಚನ್ನಾಗಿ ಮೂಡಿ ಬಮ್ದಿದೆ. ಹೌದು ನೀವು..ಹೊರನಾಡಿನಲ್ಲಿದ್ದೀರಾ?

ನರೇಂದ್ರ ಪೈ said...

ಭಾವಲೋಕದ ಲಹರಿಯನ್ನು ಭಾಷೆಯಲ್ಲಿ ಹಿಡಿದಿಟ್ಟ ರೀತಿ ಓದುಗರ ಮನಸ್ಸನ್ನೂ ತನ್ನೊಂದಿಗೇ ಸೆಳೆದ್ಯೊಯ್ಯುವಂತಿದೆ. ಪ್ರಾಮಾಣಿಕವಾದ ನಿವೇದನೆಯ ಶಕ್ತಿಯದು. ನಿಮ್ಮ ಬ್ಲಾಗ್ ನೋಡಿ ಖುಶಿಯಾಯಿತು, ರೆಗ್ಯುಲರ್ ಆಗಿ ಬರೆಯುತ್ತಿರಿ...

ತೇಜಸ್ವಿನಿ ಹೆಗಡೆ said...

ಭಾವನೆಗಳನು ಹಿತಮಿತವಾಗಿ ತುಂಬಿದ ಬರಹ ತುಂಬಾ ಚೆನ್ನಾಗಿ ಬಂದಿದೆ. ದೂರದ ಬೆಟ್ಟ ಸದಾ ನುಣ್ಣಗೆ ಕಾಣಿಸುವುದು. ಆದರ ಅದರ ಮೋಹ ಮಾತ್ರ ಸ್ವತಃ ಹೋಗಿ ನೋಡುವವರೆಗೆ ಬಿಡದು ಅಲ್ಲವೇ? ನಮ್ಮೂರು ಚಂದವೋ ನಿಮ್ಮೂರು ಚಂದವೋ ಎಂದು ಕೇಳಿದರೆ ತಟ್ಟೆಂದು ಮನ ಹೇಳುವುದು ನಮ್ಮೂರು ಹಾಗೂ ನಮ್ಮೋರೇ ಚಂದ ಎಂದು :)

Creativity said...

ಅತ್ಯ್ಥಮವಗಿದೆ :) :)

sunaath said...

ತುಂಬ ಭಾವಪೂರ್ಣವಾದ ಬರವಣಿಗೆ ನಿಮ್ಮದು. ಮನಸ್ಸನ್ನು ಸೆರೆಹಿಡಿಯುತ್ತದೆ.

Unknown said...

ಬರಹ ಚೆನ್ನಾಗಿದೆ..

ಸುಧೇಶ್ ಶೆಟ್ಟಿ said...

ಉಮಾ ಅವರೇ...

ಒ೦ದು ಬರಹ ಓದಿ ಮತ್ತೊ೦ದು ಬರಹ ಓದುವ ಮನಸು ಆಯಿತು... ಹಾಗೆ ಓದುತ್ತ ಓದುತ್ತ ಬ್ಲಾಗಿನಲ್ಲಿರುವ ಎಲ್ಲ ಬರಹಗಳನ್ನೂ ಪೂರ್ತಿ ಓದಿ ಬಿಟ್ಟೆ. ಮನಸೂರೆಗೊಳಿಸುವ ಆಪ್ತವಾದ ನವಿರಾದ ಶೈಲಿ ನಿಮ್ಮದು. ತು೦ಬಾ ಖುಶಿ ಆಗುತ್ತದೆ ನಿಮ್ಮ ಬರಹಗಳನ್ನೂ ಓದುವಾಗ...

ಬರೀತಾ ಇರಿ ಹೀಗೆಯೇ ಸು೦ದರವಾಗಿ....

ಚುಕ್ಕಿಚಿತ್ತಾರ said...

ಭಾವನೆಗಳ ಮಹಾಪೂರವೇ ಇದೆ ನಿಮ್ಮ ಬರಹದಲ್ಲಿ..
ಚ೦ದದ ಬರಹ..

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

Nice narration :-)

Subrahmanya said...

ಸ್ವಲ್ಪ ತಡವಾಗಿ ಬಂದೆ..ನಿಧಾನವಾಗಿ ಓದುವ ಮನಸ್ಸಿತ್ತು...ಹಾಗಾಗಿ. ಅಧ್ಬುತ ಪದಗಳ ಸಂಯೋಜನೆಯೊಮ್ದಿಗೆ ಭಾವವನ್ನು ಮೇಳೈಸಿದ್ದೀರಿ. ಚೆನ್ನಾಗಿದೆ.

ಮನಮುಕ್ತಾ said...

ನಿಜಕ್ಕೂ ತು೦ಬಾ ಸು೦ದರ ಬರಹ.
ನವಿರಾದ ಭಾವನೆಗಳಲ್ಲಿ ಮಾಡಿದ ತುಲನಾತ್ಮಕ ಬರಹ..
Thanks.

Uma Bhat said...

ಇಂಚರ ಅವರೇ,
ಸ್ಫೂರ್ತಿ ತುಂಬುವ ನಿಮ್ಮ ಮಾತುಗಳಿಗೆ ಧನ್ಯವಾದಗಳು.
ಪ್ರೀತಿಯೊಂದಿಗೆ
ಉಮಾ.


ವಸಂತ್,
ಹೌದು ಪೂರ್ವದ ವಿಚಾರ, ಅನುಭವಗಳೇ ಬೇರೆ.
ಪಶ್ಚಿಮದ ರೀತಿಗಳೇ ಬೇರೆ. ಹಾಗಾಗಿ ಹೊಂದಿಕೆ
ಅನ್ನುವುದು, ಅವರವರ ಶಕ್ತಿ ಸಾಮರ್ತ್ಯಗಳನ್ನು
ಅವಲಂಬಿಸಿಕೊಂಡಿದೆ.
ಪ್ರೀತಿಯೊಂದಿಗೆ
ಉಮಾವತಕ್ಕಾ.

ಮೊಗೇರ ಹಾಗು ಭಟ್ ಅವರೇ
ನಿಮ್ಮ ಪ್ರೋತ್ಸಾಹದ ಮಾತುಗಳಿಗೆ
ಧನ್ಯವಾದಗಳು.
ಪ್ರೀತಿಯೊಂದಿಗೆ
ಉಮಾ.

ಜಲನಯನ ಅವರೇ,
ಈವರೆಗೆ ಪ್ರವಾಸ ಪ್ರಯಾಸ ಆಗಿಲ್ಲಾ ಸಧ್ಯ.
ನಿಮ್ಮ ಮೆಚ್ಚುಗೆಗೆ ಕೃತಜ್ನೆತೆಗಳು.
ಪ್ರೀತಿಯೊಂದಿಗೆ
ಉಮಾ.

ನರೇಂದ್ರ ಪೈ ಅವರೇ,
ನಿಮ್ಮಂಥವರ ಪ್ರೋತ್ಸಾಹದಿಂದ ನಿವೇದನೆಯ ಶಕ್ತಿ,
ಇನ್ನಷ್ಟು ಬಲಗೊಳ್ಳಬಹುದು ಎಂಬ ನಂಬಿಕೆ ನನಗೆ.
ಪ್ರೀತಿಯೊಂದಿಗೆ
ಉಮಾ.

ತೇಜಸ್ವಿನಿ ಹೆಗಡೆಯವರೇ,
ನಮ್ಮೂರು ಚಂದ, ನಿಮ್ಮೂರೂ ಚಂದವೇ.
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ಪ್ರೀತಿಯೊಂದಿಗೆ
ಉಮಾ.

Creativity,
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ಪ್ರೀತಿಯೊಂದಿಗೆ
ಉಮಾ.

ಸುನಾಥ್ ಅವರೇ,
ನಿಮ್ಮ ಅಕ್ಷರ ಪ್ರೀತಿಗೆ ಧನ್ಯವಾದಗಳು.
ಪ್ರೀತಿಯೊಂದಿಗೆ
ಉಮಾ.

ರವಿಕಾಂತ ಗೋರೆಯವರೇ,
ಧನ್ಯವಾದಗಳು.
ಪ್ರೀತಿಯೊಂದಿಗೆ
ಉಮಾ.

ಸುಧೇಶ್ ಶೆಟ್ಟಿಯವರೇ,
ನಿಮ್ಮ ಅಭಿಮಾನ ನನ್ನ ಬರಹಗಳನ್ನು ಇನ್ನಷ್ಟು
ಹೋಳಪುಗೊಳಿಸಲಿ ಎಂಬ ಆಸೆಯೊಂದಿಗೆ, ಧನ್ಯವಾದಗಳು.
ಪ್ರೀತಿಯೊಂದಿಗೆ
ಉಮಾ.

ಚಿತ್ತಾರ ಅವರೇ,
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ಪ್ರೀತಿಯೊಂದಿಗೆ
ಉಮಾ.

ಪೂರ್ಣಿಮಾ ಅವರೇ,
ಬ್ಲಾಗಿಗೆ ಬಂದಿದ್ದಕ್ಕೆ,
ಬಂದು ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ,
ಧನ್ಯವಾದಗಳು.
ಪ್ರೀತಿಯೊಂದಿಗೆ,
ಉಮಾ.

ಸುಬ್ರಹ್ಮಣ್ಯ ಭಟ್ ಅವರೇ,
ನಿಮ್ಮ ಪ್ರೋತ್ಸಾಹದ ನುಡಿಗೆ,
ಧನ್ಯವಾದಗಳು.
ಪ್ರೀತಿಯೊಂದಿಗೆ,
ಉಮಾ.

ಮನಮುಕ್ತಾ ಅವರೇ,
ನಿಮ್ಮ ಪ್ರತಿಕ್ರಿಯೆಗೆ ,
ಧನ್ಯವಾದಗಳು.
ಪ್ರೀತಿಯೊಂದಿಗೆ,
ಉಮಾ.

GGHEGDE said...

ondu kavana odidante.aaha shabdagale sundara

ಶಿವರಾಮ ಭಟ್ said...

ತಿರುಗಿ ಬಂದಮೇಲೆ ನಮ್ಮ ಬೆಂಗಳೂರಿನ ಕುರಿತು ಭಾವಪೂರ್ಣ ಲೇಖನ ನಿರೀಕ್ಷಿಸಲೇ?
ವೈಮಾನ್ತರಿಕ್ಷಯಾನದಿಂದ ದರಗಿಳಿಯುತ್ತಿದ್ದಂತೆ ಅಕ್ಷಿನಾಸಿಕಗಳನ್ನು ತುಂಬಿಕೊಳ್ಳುವ ದಹಿತ ತೈಲ ಧೂಮ! ಎಲ್ಲೆಲ್ಲೂ ಮರಳಲಾರಿಗಳು! ಸಲಾಕೆಯನ್ನೋ, ಕಠಿಣಲೋಹ ಭಾಜನವನ್ನೋ ಹಿಡಿದು ಚಂಗನೆ ಜಿಗಿಯುವ ಕಾರ್ಮಿಕ ಲಲನೆಯರು! ಭಿತ್ತಿಯಮೇಲೆ ಚಿತ್ತಾರ ಮೂಡಿಸುವ ತಾಂಬೂಲರಸ, ಚಂದ್ರ ಬಿಂಬ ಸಮಾಕಾರಿ ಗೋಮಾಯ ಬೆರಣಿಗಳು!ಕರ್ಣಾನಂದಕರ ತೋರ್ರ್ ಪೋರ್ರ್ ನಿನಾದದೊಂದಿಗೆ ಧೂಮವನ್ನು ನಿರಸ್ತಗೊಳಿಸುತ್ತ ಚಿಮ್ಮುವ ರಿಕ್ಷಾಗಳು ! ಕರತಾಡನಂಗೈದು ಯತಾಶಕ್ತಿ ಧನಯಾಚಿಸುವ ಸ್ಪರ್ಶೋತ್ಸುಕ ಬೃಹನ್ನಳೆಯರು! ಎಲ್ಲೆಂದರಲ್ಲಿ ಪ್ರವಹಿಸುತ್ತ ಜನರ ನಾಸಿಕವನ್ನು ಪಾವನಗೊಳಿಸುವ ವೈತರಣೀ ನದಿಗಳು, ಯಮಧರ್ಮನಾಸ್ಥಾನದ ಕಿರುದರ್ಶನ ನೀಡುವ ನಿಲ್ದಾಣಗಳು,
ನಿತ್ಯ ನಿರ್ಮಾಣದಲ್ಲಿರುವ ಮೆಲುಸೇತುವೆಗಳು!
ಬೀರಬಲರಾಗಿ ಚಲಿಸುತ್ತ ತಾವು ನಡೆದುದೇ ಮಾರ್ಗವೆಂಬ ಚಾಲಕರು!
ಸ್ವರ್ಣ ಮಯೀ ಅಮೆರಿಕೆಯಾದರು ನನ್ನನ್ನು ಸೆಳೆಯದು! ರಾಮರಾಜ್ಯವೇ ಪುನರಾವಿರ್ಭವಿಸಿದಂತೆ ಭಾಸವಾಗುವ ಮಯನಗರಿಯನ್ನೂ ನಾಚಿಸುವ ನನ್ನ ಬೆಂಗಳೂರೇ ನಮ್ಮ ವೈಯಲೀಕಾವಲ್ಲೇ ಸ್ವರ್ಗಕ್ಕಿಂತಲೂ ಮಿಗಿಲು!
ಶಿವರಾಮ ಭಟ್