Thursday, February 11, 2010

ಮಾತು

ತುಟಿ ಬಿರಿದ ಮಾತುಗಳು
ತುಟಿಯೊಳಗಿನ ಮಾತಾಗುವದಿಲ್ಲ.

ತುಟಿ ಬಿರಿದ ಮಾತುಗಳು
ಕೊರೆದಿಟ್ಟ ಚಿತ್ರದಂತೆ,
ಕಾಣುವ ಕಣ್ಣಿಗೆ
ಸಾವಿರ ಅರ್ಥಗಳು.

ತುಟಿಯೊಳಗಿನ ಮಾತುಗಳು
ಮುಚ್ಚಿಟ್ಟ ಬಾಟಲಿನ ಅತ್ತರದಂತೆ,
ಅದು ಘಮಘಮಿಸುವದಿಲ್ಲ,
ಕಾಲನ ಜೊತೆ ಆವಿಯಾಗಿ ಬಿಡುತ್ತದೆ.

ತುಟಿ ಬಿರಿದ ಮಾತುಗಳು
ಅರಳಿ ನಿಂತ ಮಲ್ಲಿಗೆಯಂತೆ
ನಳನಳಿಸುತ್ತವೆ, ಮತ್ತು
ಬಸವಳಿದು ಬಾಡುತ್ತವೆ.

ತುಟಿಯೊಳಗಿನ ಮಾತುಗಳು
ಚಿಪ್ಪಿನೊಳಗಿನ ಹನಿಯಂತೆ,
ಮುತ್ತೂ ಆಗುತ್ತವೆ,
ಶೂನ್ಯವೂ ಆಗುತ್ತವೆ.

ತುಟಿ ಬಿರಿದ ಮಾತುಗಳು
ರೆಕ್ಕೆ ಬಲಿತ ಹಕ್ಕಿಯಂತೆ,
ಮೇಲಕ್ಕೂ ಹಾರುತ್ತವೆ,
ಕೆಳಕ್ಕೂ ಜಾರುತ್ತವೆ.

ತುಟಿಯೊಳಗಿನ ಮಾತುಗಳು
ಹೆಪ್ಪುಗಟ್ಟಿದ ಹಿಮದಂತೆ,
ತಂಪಾಗಿರುತ್ತವೆ,
ತಣ್ಣಗೆ ಕೊರೆಯುತ್ತವೆ.

ತುಟಿ ಬಿರಿದ ಮಾತುಗಳೆಂದೂ
ತುಟಿಯೊಳಗಿನ ಮಾತಾಗುವದಿಲ್ಲ.

21 comments:

ಚುಕ್ಕಿಚಿತ್ತಾರ said...

ತುಟಿಯೊಳಗಿನ ಮಾತುಗಳು
ಚಿಪ್ಪಿನೊಳಗಿನ ಹನಿಯಂತೆ,
ಮುತ್ತೂ ಆಗುತ್ತವೆ,
ಶೂನ್ಯವೂ ಆಗುತ್ತವೆ.

ಇಶ್ಟ ಆಯ್ತು...

SANTA said...

maatu belli mouna bangara! maatina hada sikkidare maatra belliyante adu tuttiyaaguttade. illadiddare date bar aada attaradante! nice poem.

Creativity said...

ಬಹಳ ಸುಂದರವಾದ ಕವನ :) :)

ಸುಧೇಶ್ ಶೆಟ್ಟಿ said...

ತು೦ಬಾ ಚೆನ್ನಾಗಿ ಬರೆದಿದ್ದೀರಿ... ತು೦ಬಾ ಇಷ್ಟ ಆಯಿತು...

ಮನಮುಕ್ತಾ said...

ಸೊಗಸಾದ ಅರ್ಥಪೂರ್ಣ ಕವನ..
ಧನ್ಯವಾದಗಳು..

ತೇಜಸ್ವಿನಿ ಹೆಗಡೆ said...

ತುಂಬಾ ಚೆನ್ನಾಗಿದೆ ಕವನ. ಒಮ್ಮೊಮ್ಮೆ ತುಟಿಯೊಳಗಿನ ಮಾತಿಗಿಂತ ಹೊರಗಿನ ಮಾತೇ ಚೆನ್ನ ಎಂದೆನಿಸುತ್ತದೆ.

ತುಟಿಯೊಳಗಿನ ಮಾತುಗಳು
ಸುಪ್ತವಾಗಿ ಅಡಗಿಹ ಬೆಂಕಿಯಂತೆ,
ಒಳಗೊಳಗೇ ಹತ್ತುರಿದು,
ನಮ್ಮನ್ನೇ ಸುಡುತ್ತಿರುತ್ತವೆ....

ಅಲ್ಲವೆ? :)

ಸಾಗರದಾಚೆಯ ಇಂಚರ said...

ಕೆಳಗಿನ ಸಾಲುಗಳು ಎಷ್ಟು ಸುಂದರ


ತುಟಿಯೊಳಗಿನ ಮಾತುಗಳು
ಮುಚ್ಚಿಟ್ಟ ಬಾಟಲಿನ ಅತ್ತರದಂತೆ,
ಅದು ಘಮಘಮಿಸುವದಿಲ್ಲ,
ಕಾಲನ ಜೊತೆ ಆವಿಯಾಗಿ ಬಿಡುತ್ತದೆ.

ಒಳ್ಳೆಯ ಕವನಕ್ಕೆ ಅಭಿನಂದನೆಗಳು

sunaath said...

ವಾಹ್ ಉಮಾ!
ತುಟಿಯೊಳಗಿನ ಮಾತಿನಷ್ಟೇ ಸುಂದರವಾಗಿ ಕವನವನ್ನು ಕಟ್ಟಿಕೊಟ್ಟಿದ್ದೀರಿ. ಅಭಿನಂದನೆಗಳು.

ಜಲನಯನ said...

ಉಮಾರವರೇ, ತುಟಿಬಿರಿಯದ ಮಾತು - ಇಂಗಿತವಷ್ಟೇ..ಅಲ್ಲವೇ? ಹಾಗಾಗಿ ಅದು ಏನು ಬೇಕಾದರೂ ಆಗಿರಬಹುದು..ಅದು ಅಡಗಿಸಿಟ್ಟವರಿಗೇ ಗೊತ್ತು...ಆದ್ರೆ ತುಟಿಬಿಟ್ಟ ಮಾತು ಬಿಲ್ಲಿಂದ ಹೊಅರಬಿದ್ದ ಬಾಣದಂತೆ ಪುಷ್ಪದಂತೆ ಹಿತ ಮಿತವಾಗಿರನಹುದು...ಎದೆಭೇದಿಸಿ ಭಾದಿಸಬಹುದು...ಚನ್ನಾಗಿವೆ ನಿಮ್ಮ ಸಾಲುಗಳು...ಅಡಕವಾದ ಮಾತುಗಳು.

Uma Bhat said...

ಪ್ರಿಯ,
ಚಿತ್ತಾರ, ವಸಂತ್, creativity, ಸುಧೇಶ್ ಶೆಟ್ಟಿ, ಮನಮುಕ್ತಾ, ತೇಜಸ್ವಿನಿ,ಇಂಚರ, ಸುನಾಥ್, ಜಲನಯನ,
ನನ್ನ ಕವಿತೆಗೆ,ಪ್ರೀತಿಯಿಂದ ಪ್ರತಿಕ್ರಯಿಸಿದ ನಿಮಗೆಲ್ಲರಿಗೂ ಧನ್ಯವಾದಗಳು.
ಪ್ರೀತಿಯಿಂದ ಉಮಾ.

Subrahmanya said...

ಆಹಾ ! ಮನದೊಳಗಿನ ಮಾತು ಸುಂದರವಾದ ಕವಿತೆಯಾಗಿದೆ..

ದೀಪಸ್ಮಿತಾ said...

ತುಟಿಯೊಳಗಿನ ಮಾತು ಮುತ್ತೂ ಆಗಬಹುದು, ಶೂನ್ಯವೂ ಆಗಬಹುದು ಎಂಬ ಸಾಲುಗಳು ಇಷ್ಟ ಆಯಿತು

Ittigecement said...

ತುಟಿಯೊಳಗಿನ ಮಾತು
ತುಡಿಯುವದು..
ಹೇಳಲಾಗದೆ..
ಚಡ ಪಡಿಸಿ..
ಬಿಗಿ ಹಿಡಿದು..
ಮುತ್ತಾಗಬಹುದು..
ಹನಿ ಹನಿಯಾಗಿ..
ಕಣ್ಣಿನಂಚಿನಲಿ...

ಚಂದದ ಸಾಲುಗಳಿಗೆ ಅಭಿನಂದನೆಗಳು....

Unknown said...

ಚೆನ್ನಾಗಿದೆ...

"ಅತ್ಯಂತ ಕಡಿಮೆಯಾಗಿರಬೇಕು ಮಾತು

ಕಾಗದಕೆ ಬೀಳಬಾರದು ಯಾವ ತೂತು.."

ಶಿವರಾಮ ಭಟ್ said...
This comment has been removed by the author.
ಸೀತಾರಾಮ. ಕೆ. / SITARAM.K said...

ವ್ಯಕ್ತ-ಮತ್ತು ಅವ್ಯಕ್ತ ಭಾವನೆಗಳ ಚಿತ್ರಣದ ತಮ್ಮ ಈ ಕವನ. ಅವ್ಯಕ್ತ ಭಾವನೆಗಳು ಅ೦ತರ೦ಗದ-ಆತ್ಮದ ರತಿಯೊ೦ದಿಗೆ ಬೆ೦ಕಿ -ತ೦ಪು ನೀಡಿದರೆ, ವ್ಯಕ್ತ ಭಾವನೆಗಳು ಬೇರೆಯವರಿಗೆ -ತ೦ಪು-ಬೆ೦ಕಿ ಅನುಭವ ನೀಡುತ್ತದೆ. ಚೆ೦ದದ ಕವನ. ಬರೆಯುತ್ತಿರಿ.

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...
This comment has been removed by the author.
kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಹದವರಿತು ಆಡಿದರೆ ಮಾತು,
ಅದುವೇ ಅ೦ದದ ಮುತ್ತು,
ಮಾಡಿಕೊಳ್ಳಬಹುದು ಅದರದೊ೦ದು ನತ್ತು.
ಸು೦ದರ ಕವನ ಕೊಟ್ಟ ನಿಮಗೆ ಅಭಿನ೦ದನೆ

ಶಿವರಾಮ ಭಟ್ said...

ಮುಚ್ಚು ಮಾತು
ಮುತ್ತಿನಂತೆ
ಆಡದಿದ್ದಸ್ಟು
ಅಮೂಲ್ಯ
ಬಿಚ್ಚು ಮಾತು
ಬಚ್ಚಿದುವುದೊಳಿತು
ನಾಚಿಕೆಯ ನೆವದಲ್ಲಿ
ಹುಚ್ಚು ಹರಿಬಿಡದೆ
ಚುಚ್ಚು ಮಾತು
ಕಿಚ್ಚು ಹೆಚ್ಚು
ರೊಚ್ಚು ಮಚ್ಚು ಆಪತ್ತು
ಹೆಚ್ಚು ಮಾತು
ಸ್ವಗತವಿರಲಿ
ಸ್ವಚ್ಚ ಮನದ
ಪ್ರೀತಿ ಬೆರೆಸಿ
ಎಚ್ಚರದ ಚಿತ್ತದಲ್ಲಿ
ಹೊಚ್ಚ ಹೊಸತು
ಜ್ಞಾನ ಶೋಧ
ಸತ್ವಭರಿತ ನವ ನವೀನ
ತೂಕ ಭರಿತ ಮಿತ ಗಣಿತ
ಮಾತು ಬಂಗಾರ
- shivaraama

ಅಲೆಮಾರಿ said...

good umakka:)

Raghu said...

ಸುಂದರ ಕವನ.. ಒಳ್ಳೆಯ ಬಾವ..!
ನಿಮ್ಮವ,
ರಾಘು.