Monday, December 28, 2009

ಮಾತೇ ಮರೆತವರ ನಡುವೆ

ನಾವೇಕೆ ಅಡ್ಡ ರಸ್ತೆ ಉದ್ದ ರಸ್ತೆಯ
ಈ ಮಹಡಿ ಮನೆಗೆ ಬಂದುಬಿಟ್ಟಿದ್ದೇವೆ
ಮಾತೇ ಮರೆತವರ ನಡುವೆ?


ನಾನೋ - ನೀರಿಗೋ ತರಕಾರಿಗೋ
ದಡ ದಡ ಅಂತ
ಮೆಟ್ಟಿಲ ಹತ್ತಿಳಿಯುತ್ತೇನೆ
ಒಂದಲ್ಲ, ಹತ್ತಾರು ಬಾರಿ
ಮಾತೇ ಮರೆತವರ ನಡುವೆ.


ಇವರೋ - ಹಾಲಿಗೋ ಪೇಪರಿಗೋ
ಟಿಪ್ಪು ಟಾಪಾಗಿ ಆಫೀಸಿಗೋ
ಹೋಗುತ್ತಾರೆ, ಬರುತ್ತಾರೆ
ಮಾತೇ ಮರೆತವರ ನಡುವೆ.


ಮಗ - ದೀಪು, ದೀಪಾ, ದೀಪಕ್
ಎಂದು ಕೂಗುತ್ತ ಬ್ಯಾಟ್, ಬಾಲ್ ಹಿಡಿದು,
ಬರುವ ಸ್ನೇಹಿತರಿಲ್ಲದೆ
ಟೆರೇಸಿನ ಗೋಡೆಗೇ ಚೆಂಡು ಬಾರಿಸುತ್ತ
ತನ್ನ ಒಂಟಿತನವ ಮೆರೆಯುತ್ತಾನೆ
ಮಾತೇ ಮರೆತವರ ನಡುವೆ.


ಇನ್ನು ಅಪ್ಪರ್ ಕೆಜಿಯ ಪೋರಿ -
"ಅಮ್ಮಾ ನಾವೇಕೆ ಬಂದು ಬಿಟ್ಟಿದ್ದೇವೆ
ಈ ದೊಡ್ಡ ಶಹರಕ್ಕೆ" ಎಂಬ ರಾಗವನ್ನೇ ಹಾಡುತ್ತಿರುತ್ತಾಳೆ
ಮಾತೇ ಮರೆತವರ ನಡುವೆ.


ಈ ಊರಿನ ಮಳೆಗಾದರೂ ಏನು ಧಾಡಿ
ಬೇಷರತ್ತಾಗಿ ಸುರಿಯಲಿಕ್ಕೆ
ಆಗೊಮ್ಮೆ ಈಗೊಮ್ಮೆ ಚೂರು ಪಾರು.
ಅದಕ್ಕೂ ಬೇಸರವೇ
ಈ ಮಾತೇ ಮರೆತವರ ನಡುವೆ?


ಆದರೂ ನಾವು ಬದುಕಿದ್ದೇವೆ
ಅಡ್ಡ ರಸ್ತೆಯ ಉದ್ದದ ರಸ್ತೆಯ
ಈ ಮಹಡಿಮನೆಯಲ್ಲಿ
ಮಾತೇ ಮರೆತವರ ನಡುವೆ.

7 comments:

GGHEGDE said...

Nijakku matu maretiddene.Idea ellinda bante marayti.

Uma Bhat said...

ಜಿಜಿ, ಪ್ರತಿಕ್ರಿಯೆಗೆ ಕೃತಜ್ಞತೆಗಳು .

ತೇಜಸ್ವಿನಿ ಹೆಗಡೆ said...

ಅಪರಿಚಿತ ಸ್ಥಳದಲ್ಲಿ ಅಪರಿಚಿತರ ನಡುವೆ ಮಾತೂ ಮೌನವಾಗುತ್ತದೆ. ಕವಿತೆಯೊಳಗಿಂದ ಜಿನುಗುವ ಸಣ್ಣ ನೋವು ತಟ್ಟಿತು. ಚೆನ್ನಾಗಿದೆ ನಿಮ್ಮ ನಿವೇದನೆ.

Unknown said...

anubhava chennagi bandide. shubha haadaike
bvr

ವಿ.ರಾ.ಹೆ. said...

ನಮಸ್ತೆ,

ಇದು ಚೆನ್ನಾಗಿದೆ ಅಂದರೂ ಸರಿಯಾಗುವುದಿಲ್ಲ!
ವಾಸ್ತವದ ಚಿತ್ರಣ...ಹ್ಮ್..

Uma Bhat said...

ಪ್ರಿಯ ತೇಜಸ್ವಿನಿ ಹೆಗಡೆ, ಬಿ.ವಿ.ಆರ್. ವಾಸನ್, ಹಾಗೂ ವಿಕಾಸ್ ಹೆಗಡೆ ಅವರೇ ನಿಮ್ಮ ಪ್ರೋತ್ಸಾಹಕ್ಕೆ ನನ್ನ ಹ್ರದಯ ಪೂರ್ವಕ ಧನ್ಯವಾದಗಳು.
ಪ್ರೀತಿಯೊಂದಿಗೆ
ಉಮಾ

ಶಿವರಾಮ ಭಟ್ said...

ಕೇವಲ ಮಾತು ಮರೆತವರಲ್ಲ ಇವರು
ಮಾತೆಯನ್ನೇ ಮರೆತವರು
ಮಾತೃತ್ವವನ್ನೇ ಮರೆತವರು
ಮಾತೆ ಯಾರೆಂದು ಅರಿಯದವರು
ಮಾತೆಯ ಮಮತೆಯನ್ನು ಕಾಣದವರು

ಭೂಮಾತೆ, "ಗೋಮಾತೆ"
ಬಾಂಧವ್ಯ ತಿಳಿದಿಲ್ಲ
ವೇದಮಾತೆ, ಗಂಗಾಮಾತೆ ಇಲ್ಲಿಲ್ಲ
ಜಗನ್ಮಾತೆ ಮೇರಿ ಗೋರಿಯೊಳಗೆ

ಸಾಗರದ ತೀರದಲಿ
ನಿರ್ವಸ್ತ್ರ ನಿರ್ಲಜ್ಜೆ
ಸ್ವಾರ್ಥ ಕಾಮನೆಯ
ಸಾಧನೆಯೇ ಗುರಿಯಾಗಿ
ಮಾತು-ಮಾತೃತ್ವ ಮರೆತವರು