Saturday, July 10, 2010

ಆಯೀ

ಆಯೀ,
ನಿನಗೆ ಪತ್ರಿಸಬೇಕು
ಅನ್ನೋ ನನ್ನ ಸಿದ್ಧತೆಗೇ
ಎಷ್ಟೊಂದು ಹಗಲು ರಾತ್ರಿಗಳಾದವು,
ರಾತ್ರಿಗಳು  ಹಗಲಾದವು.
Sorry, ಆಯೀ.

"ನನಗೀಗ ನಿದ್ದೆಯ ಹಂಗಿಲ್ಲ,
ಕಿಶೋರನ ನೆನಪಿದೆಯಲ್ಲ"
ಎಂದು ಬರೆದಿದ್ದೆಯಲ್ಲ,
ಒಳ್ಳೆ  ಆಯೀ ನೀನು.

ಆಯೀ,
ನಿನ್ನ ಈ ಪುಟ್ಟನಿಗೆ 
ಎಷ್ಟೊಂದು ದಿನದಿಂದ ಕಾಡುತ್ತಿತ್ತು
ಹಾಳಾದ ನೆಗಡಿ ಕೆಮ್ಮು. 
ನನಗೆ ಮರೆತೇ ಹೋಗಿತ್ತು  ನೋಡು 
ನೀನು ಕಟ್ಟಿ ಕೊಟ್ಟ ಹಿಪ್ಪಲಿ ಪುಡಿ, ಜೇನುತುಪ್ಪ. 
ಅದನ್ನು ಹಾಕಿದ ಮೇಲೆಯೇ 
ಕಿಶೋರ ಆರಾಮಾಗಿದ್ದು, 
ಮತ್ತೆ  ಅದನ್ನೇ ಚಿಂತೆ ಮಾಡ್ತಾ ಕೂಡ್ರಬೇಡ. 

ಆಯೀ, 
ಹೇಗಿದೆ ನಿನ್ನ ಬೆನ್ನಿನ ನೋವು
ಎಂದೆಲ್ಲ  ನಾನು ಕೇಳುವುದಿಲ್ಲ ಬಿಡು. 
ಬೆಳಿಗ್ಗೆಯಿಂದ ಮಧ್ಯರಾತ್ರಿಯವರೆಗೂ
ಅಡಿಕೆ ಸುಲಿಯುವ ಸಡಗರ ನಿನಗೆ. 
ಅಂಗಳದ ಮೂಲೆ ಮೂಲೆಯಿಂದಲೂ 
ನುಗ್ಗಿ ಬರುವ ಛಳಿಗೂ ನಿನ್ನ ಬೆನ್ನ 
ಸವರುವ  ಧೈರ್ಯವಿಲ್ಲ.  
ಇನ್ನು,  ಆ ನೋವು ನಿನಗ್ಯಾವ ಲೆಖ್ಖ  ಹೇಳು? 

ಮತ್ತೆ ಆಯೀ, 
ಅಪ್ಪನ ಮಂಡಿ ನೋವನ್ನ ನೆನೆಸಿ ನೆನಸಿ 
ಗುಟ್ಟು ಗುಟ್ಟಾಗಿ ಕಣ್ಣೀರು ಸುರಿಸುತ್ತ ಕೂಡ್ರಬೇಡ. 
ಪಾಪ, ಅನಾರೋಗ್ಯದ ಸೈನ್ಯವೇ ಅವನ ಮೇಲೆ ದಾಳಿ ಇಟ್ಟಿದೆ.
ಆದರೂ ಅವನ ಜೀವನ ಪ್ರೀತಿ 
ಉತ್ಸಾಹ ನೋಡು, 
ಅದನ್ನು ನೋಡಿಯಾದರೂ ಖುಷಿಪಡು ಆಯೀ. 

ಆಯೀ,
ಇಂದು ಏನಾಯ್ತು ಗೊತ್ತ?
ಅಡಿಗೆ ಮಾಡುತ್ತಿದ್ದೆ.
ಸಾರಿನ ಪುಡಿಯ ಡಬ್ಬ ತೆಗೆದರೆ 
ಖಾಲಿಯಾದ ಡಬ್ಬ  ನನ್ನ ಮುಖ ನೋಡಿ ನಕ್ಕಿತು.
ನೀ ಮಾಡಿಕೊಟ್ಟ ಹುಳಿಪುಡಿ, ಚಟ್ನಿಪುಡಿ
ಎಲ್ಲಾ ಮುಗಿದದ್ದು ಹಳೆಯ ಮಾತಾಯ್ತು ಬಿಡು.
ಇದನ್ನೆಲ್ಲಾ ಸುಮ್ನೆ ಹೇಳಿದೆ ಆಯೀ
ಮತ್ತೆ ಅದನ್ನೇ ಕನವರಿಸುತ್ತ ಕೂಡ್ರಬೇಡ.


ಆಯೀ,
ಎಷ್ಟೊಂದು ದಿನವಾಗಿತ್ತು 
ಟೆರೇಸಿನ ಮೇಲೆ ಹೆಜ್ಜೆ ಊರದೇ.
ಗಿಡಗಳಿಗೆ ನೀರುಣಿಸುವದೂ
ಈಗೀಗ ನಿಂಗಿಯ ಕೆಲಸವೇ.
ಅಕಸ್ಮಾತ್ ಮೆಣಸಿನ ಕಾಯಿ 
ಒಣಗಿಸಲು ಟೆರೇಸ್ ಮೇಲೆ ಹೋದ ನನಗೆ 
ಅದೆಂಥ ವಿಸ್ಮಯ ಕಾದಿತ್ತು ಗೊತ್ತಾ? 

ನಾ ಬರುವ ದಿನ ಬೇಡ ಬೇಡ 
ಎಂದರೂ ಕೇಳದೇ ಚೀಲದ ಸಂದಿಯಲ್ಲಿ 
ತುರುಕಿದ್ದೆಯಲ್ಲ ಆ ಬಿಳೆ, ಕೆಂಪು, ಹಳದಿ 
ಸೇವಂತಿಗೆ ಸಸಿಗಳನ್ನ.
ಆ ಪುಟ್ಟ ಪುಟ್ಟ ಗಿಡಗಳೆಲ್ಲ ಬೆಳೆದು 
ಇಂದು ತನ್ನೊಡಲ ತುಂಬಿ 
ಹೇಗೆ ಅರಳಿ ನಿಂತಿವೆ ಗೊತ್ತಾ, ಆಯೀ.

19 comments:

Dr.D.T.Krishna Murthy. said...

ನಮಸ್ಕಾರ ಮೇಡಂ;ಕವಿತೆ ತುಂಬಾ ಚೆನ್ನಾಗಿದೆ.ಬಹಳ ದಿನಗಳ ನಂತರ ಬ್ಲಾಗಿಗೆ ಬರುತ್ತಿದ್ದೀರಿ.ಇನ್ನು ಮೇಲೆ ಬ್ಲಾಗಿನಲ್ಲಿ ನಿಮ್ಮ ಬರಹಗಳು ಹೆಚ್ಚು ಕಾಣಿಸಲಿ ಎನ್ನುವ ಹಾರೈಕೆ.ಧನ್ಯವಾದಗಳು.

V.R.BHAT said...

Good Effort , Go ahead!

sunaath said...

ಉಮಾ,
ಆಯಿಯ ವಾತ್ಸಲ್ಯ, ಚಟುವಟಿಕೆಯ ಬದುಕು, ನಿಸ್ವಾರ್ಥತೆ ಇವೆಲ್ಲ ಚೆನ್ನಾಗಿ ವ್ಯಕ್ತವಾಗಿವೆ. ಕೊನೆಯ ಸಾಲುಗಳಲ್ಲಿ ಆಯಿಯ
ಸೇವೆಯ ಸಾಫಲ್ಯ ಫಕ್ಕನೆ ಹೊಳೆಯುತ್ತದೆ.

Raghu said...

Nice one...
Raaghu.

ಸೀತಾರಾಮ. ಕೆ. / SITARAM.K said...

ಆಯಿಯ ಬಗ್ಗೆ ಆಪ್ತ ವೈಯಕ್ತಿಕ ಕ್ಷನಗಳನ್ನು ಹೇಳುತಾ ಅವಳಲ್ಲಿನ ಪ್ರೇಮ, ವಾತ್ಸಲ್ಯ, ಕಾಳಜಿ, ಸ್ಪಂದನೆ ಹರವಿ, ಕೊನೆಯ ಸಾಲಿನಲ್ಲ ಅವಳ ಬದುಕಿನ ಉದ್ಧೆಶವನ್ನೇ ಸಾಂಕೇತಿಕವಾಗಿ ಹೇಳಿ ಕವನದ ಹರವನ್ನು ಹಲವು ಮಟ್ಟಕ್ಕೆ ಹೆಚ್ಚಿಸಿದ್ದಿರಾ,,, ಧನ್ಯವಾದಗಳು ಒಳ್ಳೆಯ ಕವನ ಕೊಟ್ಟಿದ್ದಕ್ಕೆ!

ತೇಜಸ್ವಿನಿ ಹೆಗಡೆ said...

ಉಮಕ್ಕ,

ಭಾವಪೂರ್ಣ ಕವನ. ಎಲ್ಲರ ಆಯೀಯೂ ಹೀಗೇ ಅಲ್ಲವೇ? ಅವರ ಬದುಕೆಲ್ಲಾ ತಮ್ಮವರ ಬದುಕಲ್ಲೇ ಕಳೆದುಹೋಗುತ್ತದೆ. ಇಷ್ಟವಾಯ್ತು ತುಂಬಾ...

ದಿನಕರ ಮೊಗೇರ said...

umaa madam,
tumbaa chennaagide... nanagoo nanna ammana kelasa, preeti ellaa nenapaayitu.... tumbaa tumbaa dhanyavaada sogasaada kavanakke....

nanna blog goo banni...

ಸುಧೇಶ್ ಶೆಟ್ಟಿ said...

ಬಹಳ ದಿನಗಳ ನ೦ತರ ಬರೆದಿದ್ದೀರ.... ತು೦ಬಾ ಚೆನ್ನಾಗಿ ಮೂಡಿ ಬ೦ದಿದೆ ಕವನ ನಿಮ್ಮದೇ ಸು೦ದರ ಶೈಲಿಯಲ್ಲಿ :)

ಶಿವರಾಮ ಭಟ್ said...

ರಾಶಿ ದಿನ ಅದಮೇಲೆ ಮತ್ತೆ ಬ್ಲಾಗು!.
ಹಲಸಿನಕಾಯಿ ಚಿಪ್ಸು
ಚೌತಿಯ ಚಕ್ಕುಲಿ ಅತ್ರ್ರಾಸ
ಉಂಡೆ ಉಪ್ಪಿನಕಾಯಿ
ಹಪ್ಪಳ ತುಪ್ಪ ಎಲ್ಲ "ಆಯೀ braandinde "
ಜಾಹೀರಾತು ಇಲ್ಲದ,ಪುಕ್ಕಟೆ ಸಿಗುವ, ರಫ್ತು- ಪಾರ್ಸೆಲ್!
ನಾಲಿಗೆಗೆ ರುಚಿ,ಹೊಟ್ಟೆಗೆ ತಂಪು,ಮನಸ್ಸಿಗೆ ಖುಷಿ
ಅಗಾಧ ಗ್ರಾಹಕ ಪ್ರೀತಿ! ಏಕೈಕ ಸ್ವದೇಶೀ ಬ್ರಾಂಡು

ಸಾಗರದಾಚೆಯ ಇಂಚರ said...

ಆಯಿಯ ಪ್ರೀತಿಯ ಮುಂದೆ ಎಲ್ಲವೂ ನಗಣ್ಯ
ತುಂಬಾ ಭಾವುಕ ಕವನ

Creativity said...

ಬಹಳ ಚೆನ್ನಾಗಿದೆ ಗೆಳತಿ.

Dileep Hegde said...

chennagide uma...

Ittigecement said...

ನನ್ನಕ್ಕನ ಮನೆಯಲ್ಲಿರುವ
"ಆಯೀ.."
ನೆನಪಿಸಿ
ಕಣ್ಣುಗಳು ಮಂಜಾಗಿಬಿಟ್ಟವು..

Unknown said...

ತುಂಬಾ ದಿನಗಳ ನಂತರ ಬ್ಲಾಗ್ ಗೆ ಬಂದಿದ್ದೀರಿ.. ಹೀಗೆ ಬರೆಯುತ್ತಿರಿ..

ಅನಂತ್ ರಾಜ್ said...

ಆಯೀಗೊ೦ದು ಪತ್ರ ಮನಮುಟ್ತುವ೦ತಿದೆ."ಪುಟ್ಟ ಪುಟ್ಟ ಗಿಡಗಳೆಲ್ಲ ಬೆಳೆದು ಇಂದು ತನ್ನೊಡಲ ತುಂಬಿ ಅರಳಿ ನಿಂತಿವೆ"
ಸಾರ್ಥಕ ಬದುಕಿಗೊ೦ದು ನಮನ.

ಶುಭಾಶಯಗಳು
ಅನ೦ತ್

ವನಿತಾ / Vanitha said...

wow.:))

SATISH N GOWDA said...

ಉತ್ತಮ ಕವಿತೆ ಮೇಡಂ, ನಾನು ನಿಮ್ಮ ಬ್ಲಾಗಿಗೆ ಮೊದಲ ಬಾರಿಗೆ ಬೇಟಿ ನೀಡಿದ್ದೇನೆ . ಉತ್ತಮ ಬರಹಗಳು ನನ್ನ ಮನಸೋರೆಗೊಂಡಿವೆ . ಹಾಗೇ ಬಿಡುವು ಮಾಡಿಕೊಂಡು ಇಮ್ಮೆ ನನ್ನವಳಲೋಕಕ್ಕೆ ಬನ್ನಿ ನಿಮಗೆ ತುಂಬು ಹೃದಯದ ಸ್ವಾಗತ ನೀಡುತ್ತೇನೆ

SATISH N GOWDA
ನನ್ನ ಸ್ನೇಹಲೋಕ (orkut)
satishgowdagowda@gmail.com
ನನ್ನವಳ ಪ್ರೇಮ ಲೋಕ (blag)
http://nannavalaloka.blogspot.com

Uma Bhat said...

ಆತ್ಮೀಯವಾಗಿ ಪ್ರತಿಕ್ರಯಿಸಿದ ನಿಮಗೆಲ್ಲರಿಗೂ ಧನ್ಯವಾದಗಳು.

ಈಶ್ವರ said...

ಒಳ್ಳೆ ಕವನ :) ಚೆನ್ನಾಗಿದೆ .. ಓದಿ ತುಂಬ ಖುಷಿ ಆಯಿತು